ಕಲಬುರಗಿ : ಜಗಳ ಬಿಡಿಸಲು ಹೋದವನನ್ನೇ ಕೊಲೆ ಮಾಡಿದ ಆರೋಪಿಗೆ 5 ವರ್ಷ ಸಾದಾ ಶಿಕ್ಷೆ ಮತ್ತು 25 ಸಾವಿರ ರೂ.ದಂಡ ವಿಧಿಸಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಘಟನೆಯ ವಿವರ : ಜೇವರ್ಗಿಯ ನಿವಾಸಿ ರಾಜು ಚಟ್ನಳ್ಳಿ ಶಿಕ್ಷೆಗೆ ಗುರಿಯಾದ ಆಪಾದಿತ. ಕಳೆದ 2017ರ ಜೂನ್ 23ರಂದು ಸಾಯಂಕಾಲ ಜೇವರ್ಗಿಯ ವಿಜಯಪುರ ಕ್ರಾಸ್ ಬಳಿ ರಾಜು ಚಟ್ನಳ್ಳಿ ಮತ್ತು ಭೀಮರಾಯ ದೇಸಣಗಿ ಇಬ್ಬರು ಮಾತನಾಡುತ್ತಾ ನಿಂತಿದ್ದರು. ಅದೇ ಮಾರ್ಗವಾಗಿ ಕಾರೊಂದು ಹೋಗುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಕಾರಿನ ಚಾಲಕನ ಜತೆ ಗಲಾಟೆ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಮರೆಪ್ಪ ಮಾರಡಗಿ ಎಂಬಾತ ಸಿಕ್ಕ ಸಿಕ್ಕವರ ಜತೆ ಜಗಳವಾಡುವುದು ಸರಿಯಲ್ಲ ಎಂದು ರಾಜು ಮತ್ತು ಭೀಮರಾಯನಿಗೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರೂ ಮರೆಪ್ಪನ ಜತೆ ಜಗಳವಾಡಿದ್ದಾರೆ.
ಇನ್ನೊಬ್ಬರ ಜಗಳದಲ್ಲಿ ನೀನೇಕೆ ತಲೆ ಹಾಕುತ್ತಿಯಾ? ಎಂದು ಬೆದರಿಸಿ ಗಲಾಟೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಭೀಮರಾಯ ಮರೆಪ್ಪನನ್ನು ಹಿಡಿದಿದ್ದು, ರಾಜು ತನ್ನ ಬಳಿ ಇದ್ದ ದಪ್ಪನಾದ ವೈರ್ನಿಂದ ಹೊಡೆದಿದ್ದಾನೆ.
ಹೊಡೆತದಿಂದ ಮರೆಪ್ಪ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಹೆಚ್.ಎಂ.ಇಂಗಳೇಶ್ವರ ಈ ಕೊಲೆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ ವ್ಹಿ.ಎನ್ ಅವರು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯ ಆರೋಪಿ ರಾಜು ಚಟ್ನಳ್ಳಿಗೆ 5 ವರ್ಷ ಶಿಕ್ಷೆ ಮತ್ತು 25 ಸಾವಿರ ರೂ.ದಂಡ ಹಾಗೂ ಇನ್ನೊಬ್ಬ ಆರೋಪಿಗೆ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಕೀಲ ಗುರುಲಿಂಗಪ್ಪ ತೇಲಿ ಅವರು ವಾದ ಮಂಡಿಸಿದ್ದರು.