ಕಲಬುರಗಿ: ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಧಿಕಾರಿ ಶರತ್ ಬಿ. ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ನದಿ ತೀರದಲ್ಲಿರುವ ಗ್ರಾಮಗಳ ಜನತೆ ಬಟ್ಟೆ, ವಾಹನ ತೊಳೆಯಲು, ದನಕರುಗಳಿಗೆ ನೀರು ಕುಡಿಸುವುದು ಸೇರಿದಂತೆ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನೆರೆಯ ರಾಜ್ಯದ ಡ್ಯಾಂಗಳಿಂದ ಪ್ರತಿದಿನ ನದಿಗೆ ಬಿಡುವ ನೀರಿನ ಹೊರ ಹರಿವಿನ ಪ್ರಮಾಣದ ಮಾಹಿತಿ ಸಂಗ್ರಹಿಸಬೇಕು. ಆ ನೀರು ಜಿಲ್ಲೆಯ ಡ್ಯಾಂಗಳಿಗೆ ಬಂದು ತಲುಪುವ ದಿನ ಮತ್ತು ಸಮಯ ಅಂದಾಜಿಸಿ, ಅದಕ್ಕೆ ತಕ್ಕಂತೆ ಡ್ಯಾಂಗಳಿಂದ ನದಿಗೆ ನೀರು ಬಿಡಬೇಕು ಎಂದು ಸಲಹೆ ನೀಡಿದರು.
ಪರಿಹಾರ ಕೇಂದ್ರ ಸ್ಥಾಪನೆಗೆ ಕ್ರಮ:
ನದಿ ಪಾತ್ರದಲ್ಲಿ ತೊಂದರೆಗೊಳಗಾಗುವ ಗ್ರಾಮಗಳಲ್ಲಿ ಪರಿಹಾರ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಬೇಕು. ಅದೇ ರೀತಿ ನದಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಈಗಿಂದಲೇ ನುರಿತ ಈಜುಗಾರರನ್ನು ಗುರುತಿಸಿಕೊಂಡಿರಬೇಕು ಎಂದು ಡಿಸಿ ಸೂಚಿಸಿದರು. ಇದೇ ಸಂದರ್ಭದಲ್ಲಿ ಮಳೆಯಿಂದಾಗಿರುವ ಹಾನಿಯ ವಿವರವನ್ನು ಪಡೆದುಕೊಂಡರು.
ಅಧಿಕಾರಿಗಳಿಗೆ ಡಿಸಿ ತರಾಟೆ:
ಮುಲ್ಲಾಮಾರಿ ಕೆಳದಂಡೆ ಬ್ಯಾರೇಜ್‍ನಿಂದ ನದಿ ದಂಡೆಯ ಜನತೆಗೆ ಮಾಹಿತಿ ನೀಡದೆ ಏಕಾಏಕಿ ನೀರನ್ನು ನದಿಗೆ ಬಿಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಕಾರ್ಯಕಾರಿ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿ ಕಾರ್ಯಕಾರಿ ಎಂಜಿನಿಯರ್, ಭಾರೀ ಮಳೆಯಿಂದ ನೀರಿನ ಹರಿವು ಹೆಚ್ಚಳವಾಗಿದೆಯೇ ಹೊರತು ಮುಲ್ಲಾಮಾರಿ ಮೇಲ್ದಂಡೆ ಬ್ಯಾರೇಜ್‍ನಿಂದ ನೀರು ಬಿಟ್ಟು, ಹೊರ ಹರಿವು ಹೆಚ್ಚಳವಾಗಿಲ್ಲ ಎಂದು ತಿಳಿಸಿದರು.
ಬೆಣ್ಣೆತೋರಾ, ಗಂಡೋರಿ ನಾಲಾ ಯೋಜನೆ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಹೆಚ್ಚುತ್ತಿದ್ದು, ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಅಣೆಕಟ್ಟಿನ ಮುಖಾಂತರ ನದಿಗೆ ಯಾವುದೇ ಕ್ಷಣದಲ್ಲಿ ಬೇಕಾದರೂ ಹರಿಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದರು.