ಕಲಬುರಗಿ: ಜಿಲ್ಲೆಯ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ವಾಸ ಮಾಡುವ 453 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಮನೆಗಳ ಸರ್ವೇಗೆ ಬರುವ ಕಂದಾಯ ಸಿಬ್ಬಂದಿಗೆ ತಾಂಡಾ ನಿವಾಸಿಗಳು ಅಗತ್ಯ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ತಿಳಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಶಕಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಈಗ ಅದನ್ನು ಯುದ್ಧೋಪಾದಿಯಲ್ಲಿ ಮಾಡುತ್ತಿದೆ. ಹೀಗಾಗಿ ಪ್ರಸ್ತುತ ತಾಂಡಾದಲ್ಲಿನ ವಾಸದ ಮನೆ ಅಳತೆಯನ್ನು ಸರ್ವೇ ಮಾಡಲಾಗುತ್ತಿದೆ. ಸರ್ವೇಗೆ ಬರುವ ಸಿಬ್ಬಂದಿ ಮತ್ತು ಈ ಕಾರ್ಯಕ್ಕೆ ವಿಶೇಷವಾಗಿ ನಿಯೋಜಿಸಿದ 100 ಜನ ಸಿಬ್ಬಂದಿಗೆ ಈಗಾಗಲೇ ಗುರುತಿನ ಚೀಟಿ ನೀಡಲಾಗಿದ್ದು, ಖಾತ್ರಿ ಮಾಡಿಕೊಂಡು ಸರ್ವೇ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಪತ್ರ ಸಿಗಲಿದೆ. ಅದರ ಮೇಲೆ ಬ್ಯಾಂಕ್ ಸಾಲ ಸೇರಿದಂತೆ ಇನ್ನಿತರ ಸರ್ಕಾರಿ ಸವಲತ್ತು ಪಡೆಯಬಹುದು. ರಸ್ತೆ ಸೇರಿದಂತೆ ಮೂಲಸೌಕರ್ಯಗಳೂ ತಾಂಡಾಗಳಲ್ಲಿ ಸಿಗಲಿವೆ. ಅಲ್ಲದೇ ಮನೆ ಮಾಲೀಕತ್ವವೂ ದೊರೆಯುತ್ತದೆ. ಇನ್ನು ಮುಂದೆ ಯಾವುದೇ ಖಾಸಗಿ ವ್ಯಕ್ತಿ ಬಂದು ಜಮೀನು ತನ್ನದೆಂದು ತಕರಾರು ತೆಗೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಡಿಸಿ ಹೇಳಿದರು.
30,000 ಹಕ್ಕು ಪತ್ರ ವಿತರಣೆ ಗುರಿ: ಜಿಲ್ಲೆಯಾದ್ಯಂತ 453 ತಾಂಡಾಗಳಲ್ಲಿನ 44,627 ಮನೆಗಳ ಪೈಕಿ 30,000 ಮನೆಗಳಿಗೆ ಹಕ್ಕು ಪತ್ರ ನೀಡುವ ಗುರಿ ಹೊಂದಲಾಗಿದೆ. ಪ್ರಸ್ತುತ 14,246 ಮನೆ ಸರ್ವೇ ಕಾರ್ಯ ಮುಗಿದಿದ್ದು, ಮುಂದಿನ ಆಕ್ಟೋಬರ್ 10 ರೊಳಗೆ ಇನ್ನುಳಿದ 15,000ಕ್ಕೂ ಮೇಲ್ಪಟ್ಟ ಮನೆಗಳ ಸರ್ವೇ ಮುಗಿಸಿ ಅಕ್ಟೋಬರ್ ಮಾಹೆಯಲ್ಲಿಯೇ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು. 453 ತಾಂಡಾಗಳ ಪೈಕಿ ಸರ್ಕಾರಿ ಜಮೀನಿನಲ್ಲಿ 68, ಖಾಸಗಿ ಮತ್ತು ಉಪ ಗ್ರಾಮಗಳಲ್ಲಿ 289, ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ 62 ಹಾಗೂ ಅರಣ್ಯದಲ್ಲಿ 34 ತಾಂಡಾಗಳಿವೆ. ಅರಣ್ಯ ತಾಂಡಾ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಅದು ಇತ್ಯರ್ಥವಾದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
1.70 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಸುರಿದ ಮಳೆಯಿಂದ ಪರಿಷ್ಕೃತ ವರದಿಯಂತೆ 1.70 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಪ್ರಾಥಮಿಕ ವರದಿಯಲ್ಲಿ 1.10 ಲಕ್ಷ ಹೆಕ್ಟೇರ್ ಎಂದು ವರದಿ ನೀಡಿದ ಮೇರೆಗೆ ಈಗಾಗಲೇ ಜಿಲ್ಲೆಯ 83,645 ರೈತರಿಗೆ 74.49 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ವಿನಾಕಾರಣ ಅರ್ಜಿ ಸಲ್ಲಿಸಿದವರಿಗೆ 5 ಲಕ್ಷ ರೂ ದಂಡ : ಹೈಕೋರ್ಟ್