ಕಲಬುರಗಿ: ರಾಜ್ಯಕ್ಕೆ ಪೂರೈಸಬೇಕಾದ ಆಕ್ಸಿಜನ್ ಸಿಲಿಂಡರ್ಗಳನ್ನು ಮಹಾರಾಷ್ಟ್ರ, ಮತ್ತು ತೆಲಂಗಾಣ ರಾಜ್ಯಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದ ಆಕ್ಸಿಜನ್ ಇಂಡಸ್ಟ್ರಿ ಮೇಲೆ ಕಲಬುರಗಿ ಜಿಲ್ಲಾಡಳಿತ ದಿಢೀರ್ ದಾಳಿ ನಡೆಸಿ ಸಿಲಿಂಡರ್ ಹಾಗೂ ಇಂಡಸ್ಟ್ರಿಯನ್ನು ವಶಪಡಿಸಿಕೊಂಡಿದೆ.
ಎರಡು ದಿನಗಳ ಹಿಂದೆಯಷ್ಟೇ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅಕ್ರಮಗಳ ಮೇಲೆ ನಿಗಾ ವಹಿಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ.
ಕಲಬುರಗಿ ಹೊರವಲಯದ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿತ್ತು. ಆ ಮಾಹಿತಿಯನ್ನು ಆಧರಿಸಿ ಎಸಿ ರಾಮಚಂದ್ರ ಅವರ ಸಮ್ಮುಖದಲ್ಲಿ ವಿಜಯ ಆಕ್ಸಿಜನ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಿ, ಆಕ್ರಮವಾಗಿ ತುಂಬಿದ್ದ ಸಿಲಿಂಡರ್ ಮತ್ತು ಇಂಡಸ್ಟ್ರಿಯನ್ನು ವಶಕ್ಕೆ ಪಡೆಯಲಾಗಿದೆ.
ಸಚಿವರ ಎಚ್ಚರಿಕೆ
ಈ ದಾಳಿ ಕುರಿತಾಗಿ ಹೇಳಿಕೆ ನೀಡಿರುವ ಗಣಿ ಮತ್ತು ಭೂ ವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಜನತೆ ಸಂಕಷ್ಟದ ಸ್ಥಿತಿಯಲ್ಲಿರುವಾಗ ಹೆಚ್ಚಿನ ಹಣದ ಆಸೆಗಾಗಿ ಯಾರೊಬ್ಬರೂ ಕೂಡ ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಮಾರಾಟ ಮಾಡಬಾರದು ಎಂದಿದ್ದಾರೆ. ಅನೇಕ ಕಡೆ ಸಕಾಲಕ್ಕೆ ಸರಿಯಾಗಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವು-ನೋವು ಸಂಭವಿಸಿದೆ. ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಆಕ್ಸಿಜನ್ ತುಂಬಾ ಅತ್ಯಗತ್ಯ. ಜೀವ ಉಳಿಸುವ ಸಂಜೀವಿನಿ ಎಂದೇ ಹೇಳಲಾಗುವ ಇದನ್ನು ಕಾಳಸಂತೆಯಲ್ಲಿ ಮಾರದಂತೆ ಜನತೆಯಲ್ಲಿ ಪ್ರಾರ್ಥಿಸಿದ್ದಾರೆ. ಯಾರಾದರೂ ಅಕ್ರಮವಾಗಿ ಸಿಲಿಂಡರ್ ಗಳನ್ನು ಸಂಗ್ರಹಿಸಿಕೊಂಡಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. ಹೊರರಾಜ್ಯಗಳಿಗೆ ಸಂಪಕ೯ ಕಲ್ಪಿಸುವ ಚಕ್ ಪೋಸ್ಟ್ ಗಳನ್ನು ಇನ್ನಷ್ಟು ಬಿಗಿಗೊಳಿಸಲು ಸೂಚಿಸಿದ್ದಾರೆ.