ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಇಂದು ಪಕ್ಕಾ ಹಳ್ಳಿ ಸೋಗಡಿನ ಬಟ್ಟೆತೊಟ್ಟು ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿ ಗಮನ ಸೆಳೆದಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಹಿನ್ನೆಲೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಇಂದು ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಂಚೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಗ್ರಾಮಸ್ಥರು ಆತ್ಮೀಯವಾಗಿ ಡಿಸಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಡಿಸಿ ಸಾಹೇಬ್ರು ಬಿಳಿ ಅಂಗಿ, ಬಿಳಿ ಪಂಚೆ, ಹಸಿರು ಶಲ್ಯ ಹಾಗು ಕೆಂಪು ರುಮಾಲು ಧರಿಸಿ ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದರು. ಬಾಜಾ ಭಜಂತ್ರಿ ಡೋಲು ಮತ್ತಿತರ ವಾದ್ಯಗಳೊಂದಿಗೆ ಊರಿನ ಬೀದಿಯಲ್ಲಿ ಡಿಸಿ ಸಾಹೇಬ್ರನ್ ಮೆರವಣಿಗೆ ಮಾಡಿ ಭವ್ಯವಾಗಿ ಜನ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಗ್ರಾಮದ ಸಂಪ್ರದಾಯ ಮೆರೆದರು.

ಗ್ರಾಮ ವಾಸ್ತವ್ಯ ಹಿನ್ನೆಲೆ ಜಿಲ್ಲಾಧಿಕಾರಿ ಗುರುಕರ್, ಕಂದಾಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಹವಾಲು, ನೋಂದಣಿ ಕೇಂದ್ರ, ಕೋವಿಡ್ ಲಸಿಕೆ ನೀಡಿಕೆ ಕೇಂದ್ರ, ಆರೋಗ್ಯ ತಪಾಸಣಾ ಶಿಬಿರ, ಕ್ಷಯರೋಗ ನಿಯಂತ್ರಣ ಶಿಬಿರ ಮುಂತಾದವುಗಳನ್ನ ವೀಕ್ಷಿಸಿ ಮಾಹಿತಿ ಪಡೆದರು. ಬಳಿಕ ಗ್ರಾಮಸ್ಥರಿಂದ ರಸ್ತೆ, ಕುಡಿಯುವ ನೀರು ಮುಂತಾದವುಗಳ ಕುರಿತು ಅಹವಾಲು ಸ್ವೀಕರಿಸಿದರು.

ಪಿಂಚಣಿ, ಭಾಗ್ಯಲಕ್ಷ್ಮಿ ಬಾಂಡ್, ಪಡಿತರ ಚೀಟಿ ಇನ್ನಿತರ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಕೊಂಚೂರು ಗ್ರಾಮದ ವಿಜಯಲಕ್ಷ್ಮಿ ಮತ್ತು ಪಾರ್ವತಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಫಲ-ಪುಷ್ಪಗಳನ್ನು ನೀಡಿ ಮಹಿಳೆಯರಿಗೆ ಉಡಿ ತುಂಬಲಾಯಿತು.
ಗ್ರಾಮಸ್ಥರ ಮನವಿ ಮೇರೆಗೆ ಕೊಂಚೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಇಂದು ವಾಡಿ-ಕೊಂಚೂರು ಹಾಗು ಕಲಬುರಗಿ-ವಾಡಿ-ಕೊಂಚೂರು- ನಾಲ್ವಾರ - ಯಾದಗಿರಿಗೆ ಬಸ್ ವ್ಯವಸ್ಥೆ ಕಲ್ಪಿಸಿದರು. ಬಸ್ ಓಡಾಟಕ್ಕೆ ಚಾಲನೆ ನೀಡಿದ ಡಿಸಿ ಗುರುಕರ್ ಅವರು ಸ್ವತಃ ಬಸ್ ನಲ್ಲಿಯೇ ಕೊಂಚೂರಿನಿಂದ ಬೆಳವಡಿ ಯಾಲಾಂಬಿಕಾ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸಾದರು.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್...