ಕಲಬುರಗಿ: ನಡು ರಸ್ತೆಯಲ್ಲಿ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿ ಕೊಲೆ ಮಾಡಿ ತೆಲೆ ಮರೆಸಿಕೊಂಡಿದ್ದ, ಖತರ್ನಾಕ ಕೊಲೆಗಾರನನ್ನು ಅಫಜಲಪೂರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರವಿ ಅಲಿಯಾಸ್ ಅಭಿಷೇಕ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಒಂದು ನಾಡ ಪಿಸ್ತೂಲ್, ಒಂದು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಸೆಪ್ಟೆಂಬರ್ 9ರಂದು ಸಾಯಿಬಣ್ಣ ಎಂಬಾತನ ಬಾಯಿಯಲ್ಲಿ ಇದೇ ಪಿಸ್ತೂಲ್ ಇಟ್ಟು ಗುಂಡು ಹಾರಿಸಿ ಆರೋಪಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹೆಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೃತ್ತಿಯಲ್ಲಿ ಬೈಕ್ ಮೇಕ್ಯಾನಿಕ್ ಆಗಿರುವ ಆರೋಪಿ ಬಳಿ ನಾಡಪಿಸ್ತೂಲ್ ಬಂದಿದ್ದು ಹೇಗೆ, ಕೊಲೆಗೆ ಪ್ರಮುಖ ಕಾರಣ ಏನು ಅನ್ನೋದನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.