ಕಲಬುರಗಿ: ಜನನಿಬಿಡ ಪ್ರದೇಶವಾದ ಪಬ್ಲಿಕ್ ಗಾರ್ಡನ್ ಮುಂದೆ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆಗೈದು ಆತಂಕ ಸೃಷ್ಟಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂಬರೀಶ್ ಅಲಿಯಾಸ್ ಕಾರಪುಡಿ ಅಂಬು, ಶ್ರೀಕಾಂತ್ ಅಲಿಯಾಸ್ ಕಾಳ್ಯಾ, ಲವ್ಯಾ ಅಲಿಯಾಸ್ ಲವಕುಶ, ಗಿರಿ ಅಲಿಯಾಸ್ ಗಿರಿರಾಜ ಬಂಧಿತ ಆರೋಪಿಗಳು. ಯುವಕ ವೀರೇಶ್ ಎಂಬಾತನಿಂದ ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಕೊಡದಿದ್ದಾಗ ಆತನನ್ನು ಕೊಲೆಗೈದಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಳೆದ 20ರಂದು ಸಾಯಂಕಾಲ 4.30ರ ಸುಮಾರಿಗೆ ಕೊಲೆ ನಡೆದಿತ್ತು.
ಕೊಲೆ ನಡೆದ ದಿನ ಲಾಲಗೇರಿ ಕ್ರಾಸ್ ಬಳಿ ಆರೋಪಿಗಳು ವೀರೇಶನನ್ನು ಮಾತನಾಡಿಸಿದ್ದಾರೆ. ಬಳಿಕ ಗಾರ್ಡನ್ ಕಡೆ ಬರುವಂತೆ ಹೇಳಿದ್ದಾರೆ. ಕೊಲೆಯ ಸುಳಿವು ಇಲ್ಲದ ವೀರೇಶ ತನ್ನ ಇಬ್ಬರು ಗೆಳೆಯರೊಂದಿಗೆ ಗಾರ್ಡನ್ಗೆ ತೆರಳಿದ್ದಾನೆ. ಅಲ್ಲಿ ಆರೋಪಿಗಳು ಹಲ್ಲೆ ಮಾಡಿದಾಗ ಹೆದರಿ ಓಡಿ ಹೋಗಿದ್ದಾನೆ.
ಬಳಿಕ ಎದುರಿಗೆ ಬೈಕ್ ಮೇಲೆ ಬಂದ ಆರೋಪಿಗಳು ವೀರೇಶನ ಕಾಲಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆಗೈದು ಪರಾರಿಯಾಗಿದ್ದರು. ಮಳೆಯಲ್ಲಿಯೇ ಸುಮಾರು ಅರ್ಧ ಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ ವೀರೇಶ, ಕಡೆಗೆ ಕೊನೆಯುಸಿರೆಳೆದಿದ್ದ. ಕೊಲೆ ಆರೋಪಿಗಳ ಬಗ್ಗೆ ಅಂದೇ ಸುಳಿವು ಪಡೆದಿದ್ದ ರಾಘವೇಂದ್ರ ನಗರ ಪೊಲೀಸರು ಕಾರ್ಯಚರಣೆ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.