ಕಲಬುರಗಿ : ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಗೆ ನಾಲ್ವರು ಸದಸ್ಯರ ಅವಿರೋಧ ಆಯ್ಕೆಯಾಗಿದೆ.
ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಕ್ಷೇತ್ರ ಕಲಬುರಗಿಯಿಂದ ಶರಣಬಸಪ್ಪ ಪಾಟೀಲ, ಯಾದಗಿರಿಯಿಂದ ಸಿದ್ಧರಾಮರೆಡ್ಡಿ ಕೌಳೂರು, ಸುರಪುರ ತಾಲೂಕಿನಿಂದ ಬಾಪುಗೌಡ ಹಾಗೂ ಸೇಡಂ ತಾಲೂಕಿನಿಂದ ನಂದಕಿಶೋರ ರೆಡ್ಡಿ ಅವಿರೋಧ ಆಯ್ಕೆಯಾಗಿದ್ದಾರೆ. ಅಫಜಲಪುರ ಕ್ಷೇತ್ರದ ಅಭ್ಯರ್ಥಿ ಮಹಾಂತಗೌಡ ಪಾಟೀಲ ಸಹ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಇಂದು ನಾಮಪತ್ರ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ವಾಪಸ್ ಪಡೆಯಲು ಕೊನೆಯ ದಿನಾಂಕವಾದ ಇಂದು ಮೂರು ಜನರ ನಾಮಪತ್ರ ತಿರಸ್ಕೃತಗೊಂಡಿವೆ. ಒಟ್ಟು 27 ಜನರಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಅಂತಿಮವಾಗಿ 24 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಂತಾಗಿದೆ. ನಾಮಪತ್ರ ವಾಪಸ್ ಪಡೆಯೋ ಪ್ರಕ್ರಿಯೆ ಪೂರ್ಣಗೊಂಡಿದ್ದು, ನವೆಂಬರ್ 29 ರಂದು ಚುನಾವಣೆ ನಡೆಯಲಿದೆ. 13 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಜೇವರ್ಗಿ ತಾಲೂಕಿನಿಂದ ಕೇದಾರಲಿಂಗಯ್ಯ ಹಿರೇಮಠ, ಸುರಪುರ ತಾಲೂಕಿನಿಂದ ಸುರೇಶ್ ಸಜ್ಜನ್, ಕಲಬುರ್ಗಿ ತಾಲೂಕಿನಿಂದ ಸೋಮಶೇಖರ ಗೋನಾಯಕ್, ಶಹಾಪುರ ತಾಲೂಕಿನಿಂದ ಸಿದ್ರಾಮ ರೆಡ್ಡಿ, ಅಫಜಲಪುರ ತಾಲೂಕಿನಿಂದ ಸಾವಿತ್ರಿಬಾಯಿ ಕುಳಗೇರಿ ಸೇರಿ 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಕೆಲ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು, ಉಳಿದ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದಿದೆ.
ಡಿಸಿಸಿ ಬ್ಯಾಂಕ್ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ಆಡಳಿತರೂಢ ಬಿಜೆಪಿ ತೀವ್ರ ಕಸರತ್ತು ನಡೆಸಿದೆ. ಶತಾಯಗತಾಯ ಗೆಲ್ಲುವ ತಂತ್ರ ರೂಪಿಸಲಾರಂಭಿಸಿದೆ. ಮತ್ತೊಂದೆಡೆ ಜೆಡಿಎಸ್ ಪಕ್ಷದ ಕೆಲ ಅಭ್ಯರ್ಥಿಗಳೂ ತೀವ್ರ ಪೈಪೋಟಿ ಒಡ್ಡಿದ್ದಾರೆ. ಹೀಗಾಗಿ ಡಿಸಿಸಿ ಬ್ಯಾಂಕ್ ನ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.