ಕಲಬುರಗಿ: ಹೋಳಿ ಹುಣ್ಣಿಮೆ ದಿನ ನಡೆದ ಇಲ್ಲಿನ ಬಾಪುನಗರದ ರೌಡಿಶೀಟರ್ ವೀರತಾ ಉಪಾಧ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ತೌಸೀಫ್ ಶೇಖ್ (24), ಅಂಬರೀಶ್ ಮಳಖೇಡ (28) ಹಾಗೂ ಜೈಭೀಮ ಗಣಜಲಖೇಡ (26) ಬಂಧಿತ ಆರೋಪಿಗಳು. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮಾರ್ಚ್ 29ರಂದು ಸಾಯಂಕಾಲ 4:30ರ ಸುಮಾರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರುಗಡೆ ರಸ್ತೆ ಬಳಿ ಬಾಪುನಗರ ಬಡಾವಣೆಯ ವೀರತಾ ಉಪಾಧ್ಯ (24) ಕೊಲೆ ನಡೆದಿತ್ತು. ಲಾಲ್ಯಾ @ ಪ್ರಸಾದ, ವಿಶಾಲ ನವರಂಗ, ಸತೀಶ @ ಗುಂಡು ಫರತಾಬಾದ, ಬಾಂಬೆ ಸಂಜ್ಯಾ, ತೌಸೀಫ್ ಇತರರು ಸೇರಿ ಈತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತೀಕಾರ ತೀರಿಸಿಕೊಂಡವರು ಅಂದರ್:
ವೀರತಾ ಉಪಾಧ್ಯ ಕೊಲೆಯ ಪ್ರತಿಕಾರ ಪಡೆಯಲು ಸುಂದರ ನಗರ ಬಡಾವಣೆಗೆ ನುಗ್ಗಿ ಸಿಕ್ಕಸಿಕ್ಕವರನ್ನು ಥಳಿಸಿ, 5 ಕಾರು, 3 ಅಟೋ, 30ಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳಿಗೆ ಕಲ್ಲು, ಬಡಿಗೆಗಳಿಂದ ಹೊಡೆದು ಜಖಂಗೊಳಿಸಿ ಹಾನಿ ಮಾಡಿದಲ್ಲದೆ ಜಿಲ್ಲಾಸ್ಪತ್ರೆಗೆ ನುಗ್ಗಿ ಗ್ಲಾಸ್ ಒಡೆದು ಹಾನಿಗೊಳಿಸಿರುವ ಬಗ್ಗೆ ಬ್ರಹ್ಮಪುರ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 3 ಪ್ರಕರಣಗಳು ಕೊಲೆ ಯತ್ನ, ಉಳಿದ ಪ್ರಕರಣಗಳು ದೊಂಬಿ ಪ್ರಕರಣಗಳಾಗಿವೆ. ಈ ಪ್ರಕರಣಗಳಲ್ಲಿ ಇಲ್ಲಿಯವರೆಗೆ 48 ಜನ ಆರೋಪಿತರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಇನ್ನೂ ಹಲವರು ತೆಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ : ರೌಡಿ ಶೀಟರ್ ಕೊಲೆ ಬೆನ್ನಲ್ಲೇ ಬೆಂಬಲಿಗರಿಂದ ಕಂಡ ಕಂಡವರ ಮೇಲೆ ಹಲ್ಲೆ: ನೂರಾರು ವಾಹನಗಳು ಜಖಂ