ಕಲಬುರಗಿ: ಕೊರೊನಾ ಹರಡುವ ಶಂಕೆಯಿಂದ ವಿದೇಶದಿಂದ ಬಂದವರು ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತಂದು ತಪಾಸಣೆಗೆ ಒಳಗಾಗುವಂತೆ ಜಿಲ್ಲಾಧಿಕಾರಿ ಬಿ. ಶರತ್ ಸೂಚನೆ ನೀಡಿದ್ದಾರೆ.
ಕಳೆದೊಂದು ತಿಂಗಳಲ್ಲಿ ವಿದೇಶದಿಂದ ಬಂದವರು ಸ್ವಯಂಪ್ರೇರಿತರಾಗಿ ಇಎಸ್ಐ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಆಗಿ ತಿಳಿಸಿದ್ದಾರೆ. ವಿದೇಶದಿಂದ ಬಂದ ಕೆಲವರು ಮಾಹಿತಿ ನೀಡದ ಕಾರಣ ಈ ಎಚ್ಚರಿಕೆ ನೀಡಲಾಗಿದೆ.
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬರ್ತಿರುವುದರಿಂದ ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ರಸ್ತೆ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಖಾಸಗಿ ಬಸ್ ಸಂಚಾರ ಈಗಾಗಲೇ ಸ್ಥಗಿತಗೊಳಿಸಲಾಗಿದೆ.