ಕಲಬುರಗಿ: ಲಂಚ ಪಡೆದ ಆರೋಪದಲ್ಲಿ ಜೈಲು ಕಂಬಿ ಎಣಿಸುತ್ತಿರುವ ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ಶಂಕ್ರಣ್ಣ ವಣಿಕ್ಯಾಳ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಕಲಬುರಗಿ ಹೈಕೋರ್ಟ್ ಪೀಠ ತಿರಸ್ಕರಿಸಿದೆ. ಕೋವಿಡ್ ಬಿಲ್ ಮಂಜೂರು ಮಾಡಲು ವಣಿಕ್ಯಾಳ ತಮ್ಮ ಅಧೀನ ಸಿಬ್ಬಂದಿ ಚನ್ನಪ್ಪ ಮುಖಾಂತರ ವ್ಯಕ್ತಿಯೊಬ್ವರಿಗೆ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕ್ಕೆ ಇಟ್ಟಿದ್ದರು.
ವ್ಯಕ್ತಿಯಿಂದ ಚನ್ನಪ್ಪ ಲಂಚ ಪಡೆಯುವ ವೇಳೆ ರೆಡ್ಹ್ಯಾಂಡ್ ಆಗಿ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು. ವಿಚಾರಣೆ ವೇಳೆ ಚನ್ನಪ್ಪನು ಶಂಕ್ರಣ್ಣ ವಣಿಕ್ಯಾಳ ಅವರೇ ನನಗೆ ಲಂಚ ಪಡೆಯುವಂತೆ ಹೇಳಿದ್ದಾರೆ ಎಂದು ಹೇಳಿದ್ದರು. ಈ ವೇಳೆ ಎಸಿಬಿ ಪೊಲೀಸರು ಶಂಕ್ರಣ್ಣ ವಣಿಕ್ಯಾಳ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪ ಸಾಬೀತಾಗಿದೆ.
ಬಳಿಕ ಪೊಲೀಸರು ವಣಿಕ್ಯಾಳ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಂಕ್ರಣ್ಣ ವಣಿಕ್ಯಾಳ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಪ್ರಕರಣವನ್ನು ಕೈಗೆತ್ತಿಕೊಂಡ ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಎಮ್.ಜಿ. ಉಮಾ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಕೊಲೆಗಡುಕರನ್ನ ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು: ಆಂದೋಲ ಶ್ರೀ
ಎಸಿಬಿ ಪರ ನ್ಯಾಯವಾದಿ ಗೌರೀಶ್ ಕಾಶೆಂಪುರ್ ಅವರು ವಾದ ಮಂಡಿಸಿದ್ದು, ವಿಚಾರಣೆಗೆ ಕಾಲಾವಕಾಶ ಕೇಳಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಲಯವು ಜಾಮೀನು ಅರ್ಜಿ ತಿರಸ್ಕರಿಸಿದ್ದು, ಈ ಮೂಲಕ ಶಂಕ್ರಣ್ಣ ವಣಿಕ್ಯಾಳಗೆ ಜೈಲೇ ಗತಿ ಎಂಬಂತಾಗಿದೆ.