ಕಲಬುರಗಿ: ದಲಿತ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿದ ಬಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಘಟನೆ ಕಮಲಾಪುರ ತಾಲ್ಲೂಕಿನ ಹರಕಂಚಿ ಗ್ರಾಮದಲ್ಲಿ ನಡೆದಿದೆ. ಇನ್ನೊಂದೆಡೆ, ಘಟನೆ ನಡೆದು ಕೆಲ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮಹಾಗಾಂವ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಕಂಚಿ ಗ್ರಾಮದ ಜಗದೇವಪ್ಪ ಕ್ವಾಟನೂರ (45) ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥೀತಿಯಲ್ಲಿದ್ದಾರೆ. ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹರಕಂಚಿ ಗ್ರಾಮದ ರೌಡಿಶೀಟರ್ಗಳಾದ ಶಂಕರ ನಾಯ್ಕೋಡಿ, ದೇವರಾಜ ನಾಯಕೋಡಿ, ಸುನಿಲ ನಾಯಕೋಡಿ, ವಿಶಾಲ ನಾಯಕೋಡಿ, ಮಾಣಿಕ ನಾಯಕೋಡಿ, ಅನಿಲ ನಾಯಕೋಡಿ ಹಾಗೂ ಸಿದ್ರಾಮ ನಾಯಕೋಡಿ ಸೇರಿ ಒಟ್ಟು ಏಳು ಜನರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಜಗದೇವಪ್ಪ ಪತ್ನಿ ಕಾಶಿಬಾಯಿ ದೂರು ದಾಖಲಿಸಿದ್ದಾರೆ. ಈ ಮೇರೆಗೆ ಶಂಕರ, ದೇವರಾಜ, ಸುನೀಲಹಾಗೂ ಸಿದ್ರಾಮ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ.
ಗುರುವಾರ ರಾತ್ರಿ ಮೆಹಬೂಬ ಸುಭಾನಿ ಸಂದಲ ಇತ್ತು. ಜಗದೇವಪ್ಪ ಹಾಗೂ ಸ್ನೇಹಿತರು ಇರುವ ಸ್ಥಳಕ್ಕೆ ಆಗಮಿಸಿದ ಆರೋಪಿಗಳು ಕುಡಿದು ಮತ್ತಿನಲ್ಲಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯವರಿಗೆ ಹೇಳಿ ಬರೋಣ ನಡೆಯಿರಿ ಎಂದು ಜಗದೇವಪ್ಪ ಶಂಕರ ಮನೆಗೆ ಕಡೆಗೆ ಹೋಗುತ್ತಿದ್ದಾಗ, ನಮ್ಮ ಮನೆಗೆ ಹೋಗುತ್ತಿಯಾ ಎಂದು ಜಗದೇವಪ್ಪ ಮೇಲೆ ಆರೋಪಿಗಳು ರಾಡ್ ಮತ್ತು ಕಟ್ಟಿಗೆಯಿಂದ ಹಲ್ಲೆಗೈದಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ವಿವರಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಉಮೇಶ ಚಿಕ್ಕಮಠ, ಮಹಾಗಾಂವ ಪಿಎಸ್ಐ ಆಶಾ ರಾಠೋಡ, ಕಮಲಾಪುರ ಪಿಎಸ್ಐ ಸಂಗೀತಾ ಸಿಂಧೆ ಮತ್ತಿತರರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕೋಲಾರ: ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡೇಟು