ಕಲಬುರಗಿ: ನಾಳೆ ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆ ಜಿಲ್ಲೆಯಾದ್ಯಂತ ಎರಡು ದಿನಗಳವರೆಗೆ 144 ನಿಷೇಧಾಜ್ಞೆ ಹಾಗೂ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಬಿ. ಶರತ್ ಆದೇಶ ಹೊರಡಿಸಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಮುಂಜಾಗ್ರತಾ ಕ್ರಮವಾಗಿ ಕಲಂ 144 ಸಿಆರ್ ಪಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಆಗಸ್ಟ್ 6 ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದಲೇ ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಿದ್ದಾರೆ.
ನಿಷೇಧಾಜ್ಞೆ ವೇಳೆ ಗುಂಪು ಸೇರಲು ಸಂಭ್ರಮಾಚರಣೆ, ಮೆರವಣಿಗೆ ಮಾಡಲು ಅವಕಾಶವಿಲ್ಲ. ಸ್ಫೋಟಕ ವಸ್ತುಗಳ ಮಾರಾಟಕ್ಕೆ ಬ್ರೇಕ್ ಹಾಕಲಾಗಿದ್ದು, ಪಟಾಕಿ ಸಿಡಿಸುವ ಹಾಗಿಲ್ಲ. ಸಾರ್ವಜನಿಕರು ತಮ್ಮ-ತಮ್ಮ ಮನೆಗಳಲ್ಲಿಯೇ ಪೂಜೆ, ಸಂಭ್ರಮಾಚರಣೆ ಮಾಡಬಹುದು. ನಿಷೇಧಾಜ್ಞೆ ಸಮಯದಲ್ಲಿ ಕಾನೂನು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.