ಕಲಬುರಗಿ: ನಿರ್ಮಾಣ ಹಂತದಲ್ಲಿದ್ದ ಮನೆ ಕಟ್ಟಡವನ್ನು ಕಳೆದ ರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಗರದ ಆಜಾದಪುರ ಬಡಾವಣೆಯಲ್ಲಿ ನಡೆದಿದೆ. ಸಮೀನಾ ಶಂಸೀರ್ ಖಾನ್ ಎಂಬ ವಿಧವೆಗೆ ಸೇರಿದ ಕಟ್ಟಡ ಇದಾಗಿತ್ತು.
ಸಮೀನಾ ಅವರ ಪತಿ ಶಂಸೀರ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಇನ್ಶೂರೆನ್ಸ್ನಿಂದ ಬಂದಿದ್ದ ಹಣದಲ್ಲಿ 2017 ರಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟುತ್ತಿದ್ದರು. ಈಗಾಗಲೇ 9 ಲಕ್ಷ ರೂ ಖರ್ಚು ಮಾಡಿ ಲಿಂಟಲ್ವರೆಗೆ ಮನೆ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ ಕೋರ್ಟ್‌ನಲ್ಲಿ ವ್ಯಾಜ್ಯವಿರುವುದಕ್ಕೆ ನಿರ್ಮಾಣ ಹಂತದಲ್ಲಿಯೇ ನಿಲ್ಲಿಸಲಾಗಿತ್ತು. ಈಗ ದುರುದ್ದೇಶದಿಂದ ದುಷ್ಕರ್ಮಿಗಳು ಮನೆ ಕಟ್ಟಡ ನಾಶ ಪಡಿಸಿದ್ದಾರೆ ಎಂದು ಸಮೀನಾ ಕಣ್ಣೀರು ಹಾಕಿದರು.
ಪೊಲೀಸ್ ಇಲಾಖೆಯಲ್ಲಿದ್ದು ಸದ್ಯ ಅಮಾನತುಗೊಂಡಿರುವ ಕಾನ್ಸಟೇಬಲ್ ಬಂದೇನವಾಜ್ ಇದಕ್ಕೆ ಕಾರಣ. ಆತನಿಗೆ ಈ ನಿವೇಶನದ ಮೇಲೆ ಮೊದಲಿನಿಂದಲೂ ಕಣ್ಣಿತ್ತು. ನನಗೆ ಮಾರಾಟ ಮಾಡಿ ಎಂದು ಪೀಡಿಸುತ್ತಿದ್ದ. ಮಾರಾಟಕ್ಕೆ ಒಪ್ಪದಿದ್ದಾಗ ಪೊಲೀಸರು ಮತ್ತು ಗೂಂಡಾಗಳನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಹೆದರದೇ ಜಾಗ ಮಾರಾಟ ಮಾಡದಿದ್ದಕ್ಕಾಗಿ ಕಟ್ಟಡ ನಾಶಪಡಿಸಿದ್ದಾರೆ ಎಂದು ಸಮೀನಾ ಆರೋಪಿಸಿದ್ದಾರೆ.
ಇದನ್ನೂ ಓದಿ : ಚಿನ್ನದ ಸರ ಕಳವು, ಖೋಟಾ ನೋಟುಗಳ ತಯಾರಿಕಾ ಜಾಲ ಪತ್ತೆ: ಕೇರಳ ಮೂಲದ ಆರೋಪಿಗಳ ಬಂಧನ