ಕಲಬುರಗಿ: ಸರ್ಕಾರಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಇಬ್ಬರು ಯುವತಿಯರು ಮೃತಪಟ್ಟಿದ್ದು, ಆಟೋ ಚಾಲಕ ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಸೆಂಟ್ರೆಲ್ ಜೈಲ್ ಸಮೀಪ ಇಂದು ನಡೆಯಿತು. ಕಲಬುರಗಿ ತಾಲೂಕಿನ ಇಟಗಾ ಕೆ.ಗ್ರಾಮದ ಚಂದ್ರಕಲಾ ಇಜೇರಿ (30) ಹಾಗೂ ದೇವಕಿ ಇಜೇರಿ (20) ಮೃತರು. ಖಣದಾಳ ಗ್ರಾಮದ ಆಟೋ ಚಾಲಕ ಪ್ರಹ್ಲಾದ ಕಟ್ಟಿಮನಿ ಅವರಿಗೆ ತೀವ್ರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾರಿಗೆ ಬಸ್ ರಾಯಚೂರದಿಂದ ಕಲಬುರಗಿಗೆ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲಬುರಗಿಯ ಸಂಚಾರಿ 1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳನ ಬಂಧನ: ನಗರದ ಹಳೆ ಆರ್‌ಟಿಒ ಕ್ರಾಸ್ ಹತ್ತಿರ ಆಟೋದಲ್ಲಿ ಸಂಚರಿಸುತ್ತಿದ್ದ ಮಹಿಳೆಗೆ ಶೇವಿಂಗ್ ಬ್ಲೇಡ್ ತೋರಿಸಿ ಕೊರಳಲ್ಲಿನ 20 ಗ್ರಾಂ ಚಿನ್ನದ ತಾಳಿ ಸರ ಸುಲಿಗೆ ಮಾಡಿದ್ದ ಸರಗಳ್ಳನನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಎಂ.ಬಿ.ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಪುನಗರದ ಬಾಬು ಶೇಖ್ (26) ಬಂಧಿತ ಆರೋಪಿ. ಈತನಿಂದ 1.20 ಲಕ್ಷ ರೂ ಮೌಲ್ಯದ ಸರ ಮತ್ತು ಕೃತ್ಯಕ್ಕೆ ಬಳಸಿದ ಶೇವಿಂಗ್ ಬ್ಲೇಡ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಮತ್ತಿಬ್ಬರು ವಶಕ್ಕೆ, ಲಲಿತ್ ಝಾಗೆ ಪೊಲೀಸ್ ಕಸ್ಟಡಿ