ಕಲಬುರಗಿ: ಹೊಲದ ಬದು ನಿರ್ಮಾಣದ ವೇಳೆ ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಚಿಂಚೋಳಿ ತಾಲೂಕಿನ ಮೀರಿಯಾಣ ಗ್ರಾಮದಲ್ಲಿ ನಡೆದಿದೆ.
ಅನಂತಮ್ಮ ಜಿನಗುರ್ತಿ(32) ಮೃತ ಮಹಿಳೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೊಲವೊಂದರ ಬದು ನಿರ್ಮಾಣದ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಹಾವು ಕಚ್ಚಿದ ತಕ್ಷಣ ಅನಂತಮ್ಮ ಅವರನ್ನು ಪೆದ್ದಮಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆ ನೀಡದೆ ಪಕ್ಕದ ತೆಲಂಗಾಣ ರಾಜ್ಯದ ತಾಂಡೂರು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರಂತೆ. ಅದರಂತೆ ತಾಂಡೂರನಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಸರ್ಕಾರಿ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲೂ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ.
ಕೋವಿಡ್ ಲಾಕ್‌ಡೌನ್ ಹಿನ್ನಲೆ ಮೃತದೇಹವನ್ನು ಗಂಡನ ಮನೆಗೆ ತರಲೂ ಆಗದೆ ಮಹಿಳೆಯ ತವರರಾದ ತಾಂಡೂರ ತಾಲೂಕಿನ ಪೆದ್ದೆಮಲ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಸಲಾಗಿದೆ. ಮಹಿಳೆಯ ಕುಟುಂಬಸ್ಥರು ಕಡುಬಡವರಾಗಿದ್ದು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಿಪಿಐಎಂ ಮುಖಂಡ ಝಾಫರ್ ಖಾನಸಾಬ್, ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.