ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಧಿಕಾರಿಗಳ ನಡುವೆ ಏರ್ಪಟ್ಟ 10 ಓವರ್‍ಗಳ ಸೌಹಾರ್ದಯುತ ಕ್ರಿಕೆಟ್ ಪಂದ್ಯದಲ್ಲಿ ಪ್ರಾದೇಶಿಕ ಆಯುಕ್ತರ (ಆರ್ಸಿ-11)ತಂಡವು ಪ್ರೆಸ್-11 ತಂಡದ ವಿರುದ್ಧ 105 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್, ಸ್ಯಾನಿಟರಿ ಇನ್ಸ್ಪೆಕ್ಟರ್ ಶರಣ ಕುಮಾರ ತೆಂಗಳಿ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ಅವರ ರೋಚಕ ಆಟ ಗಮನ ಸೆಳೆಯಿತು.
ಮೊದಲು ಟಾಸ್ ಗೆದ್ದು ಆರ್.ಸಿ. ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಅವರ 4 ಬೌಂಡರಿ ಒಳಗೊಂಡ 33 ರನ್ ಹಾಗೂ ಸ್ಯಾನಿಟರಿ ಇನ್ಸ್ಪೆಕ್ಟರ್ ಶರಣಕುಮಾರ ತೆಂಗಳಿ ಅವರು 04 ಸಿಕ್ಸ್, 09 ಬೌಂಡರಿ ಸೇರಿದಂತೆ 71 ರನ್‍ಗಳನ್ನು ಬಾರಿಸಿದ್ದರಿಂದ ತಂಡ ಉತ್ತಮ ಆರಂಭ ಕಂಡು ಬೃಹತ್ ರನ್ ದಾಖಲಿಸಿತು.
ನಂತರ ಗಾಯಗೊಂಡು ನಿವೃತ್ತಿಯಾದ ತೆಂಗಳಿ ಬದಲಿಗೆ ಕ್ರೀಸ್‍ಗೆ ಇಳಿದ ಮಹಾನಗರ ಪಾಲಿಕೆ ಆಯುಕ್ತ ಪಾಂಡ್ವೆ ಅವರು 14 ರನ್ ಗಳಿಸಿದರು. ಈ ಸಂದರ್ಭದಲ್ಲಿ ನಾಯಕ ಸುಬೋಧ್ ಯಾದವ್ ಅವರು ಸ್ವಯಂ ನಿವೃತ್ತಿಯಾದ್ದರಿಂದ ತಂಡ ಸೇರಿಕೊಂಡ ಚೇತನ್ ಅವರು 15 ರನ್ ಗಳಿಸಿದರು. ಈ ಮೂಲಕ ಆರ್.ಸಿ.-11 ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 10 ಓವರ್‍ಗಳಲ್ಲಿ 146 ರನ್ ಗಳಿಸಿತು.
147 ರನ್‍ಗಳ ಗುರಿ ಬೆನ್ನಟ್ಟಿದ್ದ ಪ್ರೆಸ್-11 ತಂಡದ ಬ್ಯಾಟ್ಸ್‍ಮನ್‍ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು. ಪ್ರೆಸ್-11 ತಂಡದ ಪರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿಂಗ್ ಮಾರ್ಬನ್ಯಾಂಗ್ ಬ್ಯಾಟಿಂಗ್ ಮಾಡಿದ್ದರು, ಅದಾಗ್ಯೂ ಅಂತಿಮವಾಗಿ 10 ಓವರ್‍ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಪ್ರೆಸ್-11 ತಂಡವು 41 ರನ್ ಗಳಿಸಿ ಪರಭಾವಗೊಂಡಿತ್ತು.
ಆರ್.ಸಿ. ತಂಡದ ಪರ ಭರ್ಜರಿ ಬೌಲಿಂಗ್ ಮಾಡಿದ ರಾಹುಲ್ ಪಾಂಡ್ವೆ 4 ಹಾಗೂ ಸುರೇಶ 2 ವಿಕೆಟ್‍ಗಳನ್ನು ಕಬಳಿಸಿದರು. ರಾಹುಲ್ ಪಾಂಡ್ವೆ ಅವರನ್ನು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜೇತ ತಂಡ ಆರ್.ಸಿ.-11 ಮತ್ತು ರನ್ನರ್ ಅಪ್ ಪ್ರೆಸ್-11 ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು. ಇಡಿ ಪಂದ್ಯ ವೀಕ್ಷಿಸಿದ ಸಂಸದ ಡಾ. ಉಮೇಶ ಜಾಧವ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.