ಕಲಬುರಗಿ: ಭೂಮಂಡಲದಲ್ಲಿನ ಮಳೆ- ಬೆಳೆ ಬಗ್ಗೆ ಶಿವನಿಗೆ ವರದಿ ಸಲ್ಲಿಸಲು ಭೂಮಿಗೆ ಬರ್ತಾನೆ ಎಂಬ ಪ್ರತೀತಿ ಇರುವ ಜೋಕುಮಾರ ಸ್ವಾಮಿಯ ಹಬ್ಬ ಇಂದಿಗೂ ಉತ್ತರ ಕರ್ನಾಟಕದಲ್ಲಿ ಜೀವಂತವಿದೆ.
ಭಾದ್ರಪದ ಮಾಸದ ಅಷ್ಟಮಿ ದಿನದಂದು ಹುಟ್ಟುವ ಜೋಕುಮಾರ ಸ್ವಾಮಿಯನ್ನು ತಳವಾರ ಸಮುದಾಯದ ಮಹಿಳೆಯರು ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮನೆಮನೆಗೆ ಹೋಗುತ್ತಾರೆ. ಜೋಕುಮಾರ ಸ್ವಾಮಿಯ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜೋಕುಮಾರ ನಿಮ್ಮ ಮನೆಗೆ ಬಂದಿದ್ದಾನೆ ಎಂಬ ಸಂದೇಶವನ್ನು ನೀಡುತ್ತಾರೆ. ಜನರು ಜೋಳ, ಅಕ್ಕಿ ಸೇರಿ ಇತರೆ ದವಸ-ಧಾನ್ಯ ಹಣ ನೀಡುತ್ತಾರೆ. ಜೋಕುಮಾರ ಸ್ವಾಮಿಗೆ ಬೆಣ್ಣೆ ಹಚ್ಚಿ ಪೂಜೆ ಸಲ್ಲಿಸಿದರೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇರುವ ಕಾರಣ ಮಕ್ಕಳಿಲ್ಲದವರು ಜೋಕುಮಾರನಿಗೆ ಬೆಣ್ಣೆ ಹಚ್ಚಿ ಪೂಜೆ ಸಲ್ಲಿಸುತ್ತಾರೆ.
ಜೋಕುಮಾರ ಸ್ವಾಮಿ ಹಬ್ಬ ಆಚರಣೆಯ ಹಿನ್ನೆಲೆ:
ಗಣೇಶ ನಿಮಜ್ಜನೆಯಾದ ಮಾರನೆ ದಿನ ಜನಿಸುವ ಜೋಕುಮಾರ ಸ್ವಾಮಿ ಶಿವನ ಪುತ್ರ ಎನ್ನಲಾಗುತ್ತದೆ. ಪಾರ್ವತಿ ಪುತ್ರ ಗಣೇಶ ಭೂಮಿಗೆ ಬಂದು ಐದು ದಿನ ನೆಲೆಸುತ್ತಾನೆ. ಗಣೇಶನ ಬರುವಿಕೆ ಶ್ರೀಮಂತಿಕೆಯಲ್ಲಿ ಸ್ವಾಗತ ನಡೆದು ಐದು ದಿನ ಭಕ್ಷ ಭೋಜನ ನೀಡಿ ಸಂಭ್ರಮದಿಂದ ಕಳಿಸಲಾಗುತ್ತೆ. ಹೀಗಾಗಿ ಬಡವರ ಮತ್ತು ರೈತರ ಕಷ್ಟ ಅರಿಯದ ಗಣೇಶ, ಭೂಮಂಡಲದಲ್ಲಿ ಎಲ್ಲವು ಸಮೃದ್ಧಿಯಾಗಿದೆ, ಮಳೆ ಬೆಳೆ ಸಕಾಲಕ್ಕೆ ಬಂದು ಎಲ್ಲರು ಸಮೃದ್ಧರಾಗಿದ್ದಾರೆಂಬ ವರದಿ ನೀಡ್ತಾನಂತೆ. ಆದ್ರೆ ತ್ರಿಲೋಕದಾರಿ ಶಿವ, ಜೋಕುಮಾರನಿಗೆ ಭೂಮಿಗೆ ಹೋಗಿ ವರದಿ ಸಂಗ್ರಹಿಸುವಂತೆ ಹೇಳ್ತಾನಂತೆ, ಆಗ ಭೂಮಿಯಲ್ಲಿ ಜನಿಸುವ ಜೋಕುಮಾರ ಸ್ವಾಮಿ ಭೂತಾಯಿ ಮಡಿಲಿನಲ್ಲಿರುವ ಬಡ ಹಾಗೂ ರೈತರ ಸಂಕಷ್ಟವನ್ನು ಶಿವನಿಗೆ ವರದಿ ಮಾಡುತ್ತಾನೆ ಎಂಬ ನಂಬಿಕೆ ಇದೆ.