ಕಲಬುರಗಿ: ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಹಾಗೂ ವಸತಿ ನಿಲಯದ ಶುಲ್ಕ ಹೆಚ್ಚಳ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜೆಎನ್ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಿಸಿ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು, ಶಿಕ್ಷಣ ಭಾರತ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಜೆಎನ್ಯು ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ವಸತಿ ನಿಲಯದ ಶುಲ್ಕ ಹೆಚ್ಚಳ ನೀತಿ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಆದ್ದರಿಂದ ಏಕಾಏಕಿ ಹೆಚ್ಚಿಸಿರುವ ವಸತಿ ನಿಲಯ ಶುಲ್ಕವನ್ನು ಹಿಂಪಡೆದು, ಶಿಕ್ಷಣ ಖಾಸಗೀಕರಣವನ್ನು ನಿಲ್ಲಿಸಬೇಕು. ಪ್ರತಿಭಟನೆ ವೇಳೆ ಬಂಧಿಸಲ್ಪಟ್ಟ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಿ, ವಿದ್ಯಾರ್ಥಿಗಳ ಮೇಲೆ ಹಾಕಲಾದ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.