ಕಲಬುರಗಿ : ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ವೋಟು ಹಾಕಿ, 5 ವರ್ಷ ಅರ್ಧ ಬೆಲೆಯಲ್ಲಿ ಆರೋಗ್ಯ ಚಿಕಿತ್ಸೆ ಪಡೆಯಿರಿ. ಹೀಗಂತಾ, ಕಲಬುರಗಿ ಮಹಾನಗರ ಪಾಲಿಕೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯೊಬ್ಬರು ಆಮಿಷ ಒಡ್ಡಿರುವುದು ತಿಳಿದು ಬಂದಿದೆ. ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 42ರ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಲಿಂ ಪಟೇಲ್ ಜನರಿಗೆ ಇಂತಹ ಆಮಿಷ ಒಡ್ಡುತ್ತಿದ್ದಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.
ಅಲಿಂ ಪಟೇಲ್ ಚುನಾವಣಾ ಪ್ರಚಾರಕ್ಕಾಗಿ ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿದ್ದಾರೆ. ಹ್ಯಾಂಡ್ ಬಿಲ್ನಲ್ಲಿ ವಾರ್ಡ್ ಸಂಖ್ಯೆ 42ರ ಜನರು ತಮ್ಮ ಹೆಸರು ನೋಂದಾಯಿಸಿಕೊಂಡು 5 ವರ್ಷಗಳ ಕಾಲ, ಕ್ಯೂ.ಪಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಅರ್ಧ ಬೆಲೆಯಲ್ಲಿ ಚಿಕಿತ್ಸೆ ಪಡೆಯಬಹುದು ಅಂತಾ ಪ್ರಿಂಟ್ ಮಾಡಲಾಗಿದೆ.
ಓಪಿಡಿಗೆ ಶೇ.50ರಷ್ಟು ರಿಯಾಯತಿ. ಐಪಿಡಿಗೆ ಶೇ.20 ರಿಂದ ಶೇ.30 ರಿಯಾಯತಿ. ಔಷಧಿಗೆ ಶೇ.10 ಮತ್ತು ಲ್ಯಾಬ್ ಪರಿಕ್ಷೆಗಳಿಗೆ ಶೇ.20ರಷ್ಟು ರಿಯಾಯತಿಯನ್ನು 5 ವರ್ಷಗಳ ಕಾಲ ಪಡೆಯಬಹುದು ಅಂತಾ ಪ್ರಿಂಟ್ ಮಾಡಲಾಗಿದೆ. ಕೆಳಗಡೆ ಹಾಗೂ ಹ್ಯಾಂಡ್ ಬಿಲ್ ಹಿಂಭಾಗದಲ್ಲಿ ತಮ್ಮ ಪಕ್ಷದ ಗುರುತಿನ ಚಿಹ್ನೆ ಹಾಗೂ ನಾಯಕರ ಫೋಟೋ ಹಾಕಿ ಅಲಿಂ ಪಟೇಲ್ ಅವರಿಗೆ ಮತ ನೀಡುವಂತೆ ಕೋರಲಾಗಿದೆ.
ಅಲಿಂ ಪಟೇಲ್ ಪರವಾಗಿರುವ ಈ ಆಮಿಷದ ಹ್ಯಾಂಡ್ ಬಿಲ್‌ಗೆ ಇತರೆ ಪಕ್ಷದ ಅಭ್ಯರ್ಥಿ ಹಾಗೂ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಹಿರಾಪೂರ ಬಡಾವಣೆಯಲ್ಲಿ ಪ್ರತಿಭಟನೆ ನಡೆಸಿ ಅಲಿಂ ಪಟೇಲ್ ಅವರನ್ನು ಕಣದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿದ್ದಾರೆ.