ಕಲಬುರಗಿ: ಸರ್ಕಾರಿ ಐಟಿಐ ಕಾಲೇಜ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸಂಬಳ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಡೆಸಲು ಹೆಣಗಾಡುತ್ತಿರುವ ಬೋಧಕರು, ಲಾಕ್ಡೌನ್ ಸಂದರ್ಭದ ಸಂಬಳ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೆಮ್ಮಾರಿ ಕೊರೊನಾ ಜನರನ್ನು ನಾನಾ ರೀತಿಯಿಂದ ಸಮಸ್ಯೆಯ ಸುಳಿಗೆ ಸಿಲುಕಿಸಿ ಒದ್ದಾಡುವಂತೆ ಮಾಡಿದೆ. ಅದರಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಬೋಧಕರೂ ಕೂಡಾ ಹೊರತಾಗಿಲ್ಲ. ಕೊರೊನಾಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಲಾಕ್ಡೌನ್ ಜಾರಿ ಮಾಡಿ ಶಾಲಾ- ಕಾಲೇಜುಗಳನ್ನು ಬಂದ್ ಮಾಡಿತ್ತು. ಆ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಸಂಬಳ ನೀಡಿಲ್ಲ. ಹೀಗಾಗಿ ಜೀವನ ನಡೆಸಲು ಹೆಣಗಾಡುತ್ತಿರುವ ಅತಿಥಿ ಬೋಧಕರು, ಆಟೋ, ಟ್ಯಾಕ್ಸಿ, ಕೃಷಿ ಹೀಗೆ ಬೇರೆ ಬೇರೆ ಕೆಲಸಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಕಳೆದ ವರ್ಷದ ಲಾಕ್ಡೌನ್ನಲ್ಲಿ ಆರು ತಿಂಗಳು, 2ನೇ ಅಲೆಯಲ್ಲಿ ಈ ವರ್ಷ ನಾಲ್ಕು ತಿಂಗಳ ಸಂಬಳ ಸಿಗಲಿಲ್ಲ. ಹೀಗಾಗಿ ಜೀವನ ನಡೆಸಲು ಸಂಬಳ ಕೊಡಿ ಅಂತಾ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಸುಮಾರು 18-20 ಜನ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ 900 ಕ್ಕೂ ಹೆಚ್ಚು ಜನ ಕೆಲಸ ನಿರ್ವಹಿಸುತ್ತಿದ್ದಾರೆ. ನಿತ್ಯ 4 ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಇವರಿಗೆ ತಿಂಗಳಿಗೆ 9,600/- ರೂಪಾಯಿ ಗೌರವಧನ ನೀಡಲಾಗುತ್ತಿದೆ.
ಲಾಕ್ಡೌನ್ ಸಂದರ್ಭದ ಸಂಬಳ, ವೃತ್ತಿ ಭದ್ರತೆ, ವೈದ್ಯಕೀಯ ಭದ್ರತೆ, ಕೊರೊನಾದಿಂದ ಮೃತಪಟ್ಟ ಅತಿಥಿ ಬೋಧಕರಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಕಲಬುರಗಿ ಜಿಲ್ಲಾಡಳಿತದ ಮುಂದೆ ಅತಿಥಿ ಉಪನ್ಯಾಸಕರು ಸೇರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂಕಷ್ಟ ಕಾಲದಲ್ಲಿ ಯಡಿಯೂರಪ್ಪ ಬದಲಾವಣೆ ಸೂಕ್ತವಲ್ಲ: ಎಸ್.ವಿ ರಾಮಚಂದ್ರಪ್ಪ