ಸೇಡಂ (ಕಲಬುರಗಿ): ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಯುವ ಮುಖಂಡ, ಉದ್ಯಮಿ ಬಾಲರಾಜ ಗುತ್ತೇದಾರ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಎಕ್ಬಾಲ್ ಖಾನ್ ಸಮಾವೇಶದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿ, ಮುಂದಿನ ಅವಧಿಯಲ್ಲಿ ಜೆಡಿಎಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ ಹಿರಿಯ ನಾಗರಿಕರ ಮಾಸಾಶನ ಪ್ರತಿ ತಿಂಗಳು ಐದು ಸಾವಿರ ಮಾಡುವೆ ಎಂದು ಆಶ್ವಾಸನೆ ನೀಡಿದರು.
ಜೆಡಿಎಸ್ ಪಕ್ಷ ರಾಜ್ಯದಲ್ಲಿ ಇಲ್ಲವೇ ಇಲ್ಲ ಎಂಬ ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಬಿಂಬಿಸುತ್ತಿವೆ. ರೈತರಿಗಾಗಿ ದುಡಿದ ಪಕ್ಷವನ್ನು ಜನ ಯಾವತ್ತೂ ಕೈಬಿಡಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರೈತರಿಗಾಗಿ ಜಾರಿಗೆ ತಂದಿದ್ದರು. ಉತ್ತರ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು ಎಂಬ ಚಿಂತನೆ ನಡೆದಿದೆ ಎಂದರು.
ಓದಿ:'ಕರ್ನಾಟಕದಲ್ಲಿ ನಡೀತಿರೋ ಭ್ರಷ್ಟಾಚಾರ ಪ್ರಧಾನಿ ಕಣ್ಣಿಗೆ ಕಾಣುತ್ತಿಲ್ಲವೇ'
ರಾಜ್ಯದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಹಾಗೂ ಇನ್ನಿತರೆ ಅಭಿವೃದ್ದಿ ಕಾರ್ಯಗಳಿಗಾಗಿ ಮೀಸಲಿರಿಸಿದ್ದ ಹಣವನ್ನು ಬೇರೊಂದು ಯೋಜನೆಗೆ ಬಳಸಿಕೊಳ್ಳುವ ಮೂಲಕ ರೈತರಿಗೆ ಮೋಸ ಮಾಡಿದೆ. ಪ್ರವಾಹದಿಂದ ನೆಲಕ್ಕುರುಳಿದ ಮನೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪೆಟ್ರೋಲ್ ಬೆಲೆ ಗಗನಕ್ಕೇರಿದೆ ಎಂದರು.
ಬಡವರಿಗೆ ಉಚಿತ ಅಕ್ಕಿ ಕೊಡಬೇಕೆಂಬ ಯೋಜನೆ ರೂಪಿಸಿದ್ದು ನಾನು. ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡಿದ್ದೆ. ಮನೆಗೊಂದು ಉದ್ಯೋಗ, ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಎರಡು ಅವಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತ ನೋಡಿದ್ದೀರಿ. ಈ ಬಾರಿ ಜೆಡಿಎಸ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.