ಕಲಬುರಗಿ: ಹೈದರಾಬಾದ್ ಕರ್ನಾಟಕದಲ್ಲಿರುವ ಐದು ವಿಶ್ವವಿದ್ಯಾಲಯಗಳಿಗೆ ಈ ಭಾಗದವರನ್ನು ಪರಿಗಣಿಸದೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆರೋಪಿಸಿದೆ.
ಕಲಬುರಗಿಯಲ್ಲಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳಿಗೆ ಬೆಂಗಳೂರು ಮತ್ತು ಮೈಸೂರು ಭಾಗದವರನ್ನು ಕುಲಪತಿಗಳನ್ನಾಗಿ ನೇಮಿಸಲಾಗುತ್ತಿದೆ. ಈ ಭಾಗದ ಪ್ರೊಫೆಸರ್ಗಳು ಕುಲಪತಿಯಾಗಲು ಅರ್ಹರಿಲ್ಲವೆ. ಉದ್ದೇಶಪೂರ್ವಕವಾಗಿಯೇ ಈ ಭಾಗಕ್ಕೆ ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿದರು.
ಇನ್ನು ಮುಂದೆಯಾದರೂ ಗುಲ್ಬರ್ಗಾ ವಿವಿ ಸೇರಿದಂತೆ ಐದು ವಿವಿಗಳ ಕುಲಪತಿಗಳ ನೇಮಕ ಸಂದರ್ಭದಲ್ಲಿ ಈ ಭಾಗದವರನ್ನೇ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.