ಕಲಬುರಗಿ: ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಅಂಬಿಕಾ ನಗರದಲ್ಲಿ ನಡೆದಿದೆ. ಫರಿದಾ ಬೇಗಂ ಮೃತಪಟ್ಟ ಮಹಿಳೆ. ಆರೋಪಿ ಎಜಾಜ್ ಅಹ್ಮದ್ ಬುಧವಾರ ನಡುರಾತ್ರಿ ಕೃತ್ಯ ಎಸಗಿದ್ದಾನೆ.
ಎಜಾಜ್ ಅಹ್ಮದ್ ಮತ್ತು ಫರಿದಾ ಬೇಗಂ ವೃತ್ತಿಯಲ್ಲಿ ಶಿಕ್ಷಕರು. ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಮಕ್ಕಳಿದ್ದಾರೆ. ಪತ್ನಿ ಮೇಲೆ ಸಂಶಯಪಟ್ಟು ಗಲಾಟೆ ಮಾಡುತ್ತಿದ್ದ ಪತಿ, ಸರ್ಕಾರಿ ಶಿಕ್ಷಕಿ ನೌಕರಿ ಬಿಟ್ಟುಬಿಡು ಎಂದು ಪೀಡಿಸುತ್ತಿದ್ದನಂತೆ. ಇದಕ್ಕೊಪ್ಪದ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಫರಿದಾ ಬೇಗಂ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದವರು. ಅಫಜಲಪುರ ತಾಲ್ಲೂಕಿನ ಆತನೂರು ಗ್ರಾಮದ ಆದರ್ಶ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಎಜಾಜ್ ಅಹ್ಮದ್ ಕಲಬುರಗಿ ತಾಲ್ಲೂಕಿನ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದಾನೆ.
ಇಬ್ಬರೂ ಕೂಡ ನಗರದಿಂದ ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಎಂದಿನಂತೆ ನಿನ್ನೆ ಕೂಡ ಶಾಲೆಗೆ ಹೋಗಿ ವಾಪಸ್ ಬಂದಿದ್ದಾರೆ. ರಾತ್ರಿ ಮಕ್ಕಳೊಂದಿಗೆ ಕುಳಿತು ಊಟ ಸೇವಿಸಿದ್ದಾರೆ. ಬಳಿಕ ಗಲಾಟೆ ನಡೆದಿದೆ. ಆರೋಪಿ ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾನೆ. ಘಟನೆಯನ್ನು ಮಗಳು ಅಮ್ಮನ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ.
ಫರೀದಾ ಬೇಗಂ ಅವರ ಸಹೋದರ ಬಶೀರುದ್ದೀನ್ ಪ್ರತಿಕ್ರಿಯಿಸಿ, "ನಮ್ಮ ಅಕ್ಕನಿಗೆ ಎಜಾಜ್ ಅಹ್ಮದ್ ಕಳೆದ ಎಂಟು ವರ್ಷಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ತರುವಂತೆ, ಶಿಕ್ಷಕಿ ವೃತ್ತಿಯನ್ನು ಬಿಡುವಂತೆ ಒತ್ತಾಯಿಸುತ್ತಿದ್ದ. ಈ ಕೊಲೆಗೆ ಆತನ ತಂದೆ, ತಾಯಿ ಹಾಗೂ ಅಕ್ಕ ಕೂಡಾ ಕುಮ್ಮಕ್ಕು ನೀಡಿದ್ದಾರೆ" ಎಂದು ಆರೋಪಿಸಿದರು.
ಕಲಬುರಗಿ ಸಿಟಿ ಕಮಿಷನರ್ ಚೇತನ್ ಪ್ರತಿಕ್ರಿಯಿಸಿ, "ಎಜಾಜ್ ಅಹ್ಮದ್ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಸೆಕ್ಷನ್ 302 ಮತ್ತು 498ಎ ಅಡಿಯಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ" ಎಂದರು.
ಇದನ್ನೂ ಓದಿ: ಆರ್ಡರ್ ಸಪ್ಲೈ ತಡವಾಗಿದ್ದಕ್ಕೆ ಬಾರ್ ಸಿಬ್ಬಂದಿಯ ಹತ್ಯೆ: ಇಬ್ಬರು ಸೆರೆ