ಕಲಬುರಗಿ: ಪ್ರಾಮಾಣಿಕತೆ, ಶ್ರದ್ಧೆ ಇರುವ ಶಿಸ್ತುಬದ್ಧ ವಿದ್ಯಾರ್ಥಿಗಳಿಗೆ ಮಾತ್ರ ಕಲಿಕಾ ಸಾಧನೆ ಸಾಧ್ಯ ಎಂದು ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಅಭಿಪ್ರಾಯಪಟ್ಟರು. ನಗರದ ಮೌಂಟ್ ವೇವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಸಾಧ್ಯ ಎಂಬ ಪದ ನಿಮ್ಮ ನಿಘಂಟಿನಲ್ಲಿ ಇರಬಾರದು. ವೈಫಲ್ಯದ ಆಲೋಚನೆ ಬಿಟ್ಟು ಹೊಸ ವಿಷಯಗಳನ್ನು ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶಾಂತಕುಮಾರ ಪುರದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪರೀಕ್ಷೆಯಲ್ಲಿ ಕೇವಲ 40% ಅಥವಾ 50% ಅಂಕಗಳು ಬಂದರೆ ಸಾಕು ಅಂತ ಹೇಳದೆ ಎತ್ತರದ ಗುರಿ ತಲುಪಲು ಪ್ರಯತ್ನಿಸಿ. ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಂದು ಅಪರಾಧ ಎಂಬ ಕಲಾಂ ಅವರ ಹೇಳಿಕೆ ಮರಿಯದೆ ಎತ್ತರದ ಗುರಿ ಮುಟ್ಟಲು ಸತತ ಪ್ರಯತ್ನ ಮಾಡಿ. ಇದರಿಂದ ಜೀವನದ ಬಹು ದೊಡ್ಡ ಸಾಧನೆಗಳು ನಮ್ಮದಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ, ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಓಕಳಿ, ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಅವರನ್ನು ಸನ್ಮಾನಿಸಲಾಯಿತು.