ಕಲಬುರಗಿ: ಕಳೆದ ಎಂಟು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಕಡೆಗೂ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕಳೆದ ವರ್ಷ ಜೂನ್ 26ರಂದು ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯ ವಾರ್ಡ್ಗಳ ಮರು ವಿಂಗಡಣೆ, ಮೀಸಲಾತಿ ಹಾಗೂ ಮತದಾರರ ಪಟ್ಟಿ ಅಧಿಸೂಚನೆ ಪ್ರಕಟಿಸಿತ್ತು. ಆದರೆ ಮರು ವಿಂಗಡಣೆ, ಮೀಸಲಾತಿ ಹಾಗೂ ಮತದಾರರ ಪಟ್ಟಿ ತಯಾರಿಸುವಲ್ಲಿ ಅವೈಜ್ಞಾನಿಕ ನೀತಿ ಅನುಸರಿಸಲಾಗಿದೆ ಎಂದು ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಕಲಬುರ್ಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆ 8 ತಿಂಗಳ ಹಿಂದೆ ನಡೆಯಬೇಕಿದ್ದ ಮಹಾನಗರ ಪಾಲಿಕೆ ಚುನಾವಣೆಗೆ ಬ್ರೇಕ್ ಬಿದ್ದಿತ್ತು. ಈಗ ರಾಜ್ಯ ಸರ್ಕಾರ ಅಧಿಸೂಚನೆ ಹಿಂಪಡೆಯುವುದಾಗಿ ಹೈಕೋರ್ಟ್ ಪೀಠಕ್ಕೆ ಲಿಖಿತ ಒಪ್ಪಿಗೆ ನೀಡಿದೆ.
ಇದರೊಂದಿಗೆ ಪ್ರಕರಣ ಇತ್ಯರ್ಥಗೊಂಡಿದ್ದು, ಶೀಘ್ರವೇ ಪಾಲಿಕೆಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಸರ್ಕಾರ ಮತ್ತೊಮ್ಮೆ ಮಹಾನಗರ ಪಾಲಿಕೆಯ ವಾರ್ಡ್ಗಳ ಮರುವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಲಿದೆ. ಬಳಿಕ ಪಾಲಿಕೆಗೆ ಚುನಾವಣೆ ನಡೆಯಲಿದೆ. ನಿರೀಕ್ಷೆಯಂತೆ ಮರುವಿಂಗಡಣೆ ಕೆಲಸ ಮುಕ್ತಾಯಗೊಂಡರೆ ಬರುವ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಹೈಕೋರ್ಟ್ ತೀರ್ಪು ಪಾಲಿಕೆ ಚುನಾವಣಾ ಸ್ಪರ್ಧಾ ಆಕಾಂಕ್ಷಿಗಳ ಆಸೆ ಗರಿಗೆದರಿಸಿದೆ.