ಕಲಬುರಗಿ: ಆಳಂದ ಪಟ್ಟಣದ ನಿವಾಸಿ ರೌಡಿ ಶೀಟರ್ ಮಹ್ಮದ್ ಫಿರ್ದೋಸ್ ಆರೀಫ್ ಅನ್ಸಾರಿಯನ್ನ ಗೂಂಡಾ ಕಾಯ್ದೆಯಡಿ ಬೆಳಗಾವಿ ಕಾರಾಗೃಹದಲ್ಲಿ ಬಂಧಿಸಿಡಲು ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಪೀಠ ಎತ್ತಿ ಹಿಡಿದಿದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಆರೋಪದ ಹಿನ್ನೆಲೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಕಳೆದ ಮೇ.25 ರಂದು ಬಂಧನದ ಆದೇಶ ಹೊರಡಿಸಿದ್ದರು. ಮೇ.31 ರಂದು ಆದೇಶವನ್ನು ಸರ್ಕಾರ ಅನುಮೋದಿಸಿ ಒಂದು ವರ್ಷ ಬಂಧಿಸಿಡುವಂತೆ ಹೇಳಿತ್ತು.
ಈ ಕುರಿತು ರಚಿಸಲಾದ ಹೈಕೋರ್ಟ್ ತ್ರಿಸದಸ್ಯ ಸಲಹಾ ಮಂಡಳಿ ಸಹ ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ, ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದದಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದನು. ನ್ಯಾಯಾಲಯ ಕೂಲಂಕಷವಾಗಿ ವಿಚಾರಣೆ ನಡೆಸಿ ಆರೋಪಿ ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ಹೊರಡಿಸಿದ ಬಂಧನದ ಆದೇಶ ಎತ್ತಿಹಿಡಿದಿದೆ. ಸರ್ಕಾರದ ಪರವಾಗಿ ರಾಜ್ಯ ಉಚ್ಚ ನ್ಯಾಯಾಲಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನಚೆನ್ನಪ್ಪ ವಾದ ಮಂಡಿಸಿದ್ದರು.
ಶಾಂತಿ ಕದಡುವವರಿಗೆ ಜಿಲ್ಲೆಯಲ್ಲಿ ಜಾಗವಿಲ್ಲ: ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ಮುಂದೆ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಇರುವುದರಿಂದ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ತುಂಬಾ ಮುಖ್ಯವಾಗಿದೆ. ಸಮಾಜ ವಿದ್ರೋಹಿ ಮತ್ತು ಶಾಂತಿ ಭಂಗ ಮಾಡುವವರಿಗೆ ಜಿಲ್ಲೆಯಲ್ಲಿ ಜಾಗವಿಲ್ಲ. ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಕರಣದ ಹಿನ್ನೆಲೆ: ಸಾಮಾಜಿಕ ವಿರೋಧಿ ಕೃತ್ಯಗಳೊಂದಿಗೆ ಸಾರ್ವಜನಿಕ ಸಾಮರಸ್ಯ ಹಾಳು ಮಾಡುತ್ತಿರುವ ಆರೋಪದಡಿ ಆಳಂದ ಗಲಭೆಯ ಮಾಸ್ಟರ್ಮೈಂಡ್, ರೌಡಿ ಮೊಹ್ಮದ್ ಫಿರ್ದೋಸ್ ಅರೀಫ್ ಅನ್ಸಾರಿ (42) ಯನ್ನು ಗಡಿಪಾರು ಮಾಡಿ ಗೂಂಡಾ ಕಾಯ್ದೆಯಡಿ ಬಂಧಿಸಿಡುವ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿತ್ತು. ಫಿರ್ದೋಸ್ ಅನ್ಸಾರಿ 2000ನೇ ವರ್ಷದಿಂದ ಆಳಂದ ಪಟ್ಟಣದಲ್ಲಿ ಕಾನೂನು ಬಾಹಿರ ದಂಧೆ ಆರಂಭಿಸಿ, ಸಾರ್ವಜನಿಕ ಜೀವನಕ್ಕೆ ತೊಂದರೆ ಕೊಟ್ಟಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಈಗಾಗಲೇ ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಜೂಜು, ಅನೈತಿಕ ವ್ಯವಹಾರಗಳ ಅಪರಾಧ, ವಿಡಿಯೋ ಆಡಿಯೋ ಪೈರಸಿ, ಕೊಳಚೆ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವಿಕೆ ಕಾಯ್ದೆಗಳ ಅಡಿ ಸೇರಿದಂತೆ ಇವರ ಮೇಲೆ 33 ಪ್ರಕರಣಗಳು ದಾಖಲಾಗಿವೆ.
ಆಳಂದನಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಬಳಿಯ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನಡೆಸಲು ತೆರಳಿದಾಗ ಗಲಭೆ ನಡೆದಿತ್ತು. ಈ ವೇಳೆ, ಕಲ್ಲು ತೂರಾಟ ಸೇರಿದಂತೆ ಕಾನೂನು ಬಾಹಿರ ಕೃತ್ಯ ಎಸಗಲಾಗಿತ್ತು. ಇದರ ಹಿಂದೆ ಫಿರ್ದೋಸ್ ಅನ್ಸಾರಿ ಕೈವಾಡ ಇದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಗಡಿಪಾರು ಮಾಡಿ 2022ರ ಮೇ 25ರಿಂದ ಗೂಂಡಾಕಾಯ್ದೆ ಅಡಿ ಒಂದು ವರ್ಷಗಳ ಕಾಲ ಬಂಧಿಸಿಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮೇ.31 ರಂದು ಆದೇಶವನ್ನು ಸರ್ಕಾರ ಅನುಮೋದಿಸಿ ಒಂದು ವರ್ಷ ಬಂಧಿಸಿಡುವಂತೆ ಹೇಳಿತ್ತು. ಆದೇಶದ ಅನ್ವಯ ಈಗಾಗಲೇ ಫಿರ್ದೋಸ್ ಅವರನ್ನು ಗಡಿಪಾರು ಮಾಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ ಮಾಹಿತಿ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದದಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದನು. ಈಗ ಇದರ ವಿಚಾರಣೆ ನಡೆದಿದ್ದು, ಹೈಕೋರ್ಟ್ ಪೀಠ ಜಿಲ್ಲಾಧಿಕಾರಿ ಆದೇಶವನ್ನು ಎತ್ತಿಹಿಡಿದಿದೆ.
ಓದಿ: ಶಾಲೆಗೆ ಹೊರಟ ಬಾಲಕ ಬೆಳಗ್ಗೆ ಅಪಹರಣ, ಸಂಜೆಯೊಳಗೆ ಪೊಲೀಸರಿಂದ ರಕ್ಷಣೆ.. ಹೇಗಿತ್ತು ಗೊತ್ತಾ ಖಾಕಿ ಪಡೆ ಕಾರ್ಯಾಚರಣೆ!?