ಕಲಬುರಗಿ: ಬಿಜೆಪಿ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ ಎಂದು ಆರೋಪಿಸಿ, ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ನರಸಪ್ಪ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ರಾಜ್ಯಾಧ್ಯಕ್ಷ ನರಸಪ್ಪ, ಚುನಾವಣೆ ಪೂರ್ವದಲ್ಲಿ ಮಾದಿಗರಿಗೆ ಒಳ ಮೀಸಲಾತಿ ನೀಡೋದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಮಾದಿಗರಿಗೆ ಕೈಕೊಟ್ಟಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಹೀಗಾಗಿ ಕ್ರಾಂತಿಕಾರಿ ಹೋರಾಟ ಅನಿವಾರ್ಯವಾಗಿದೆ. ಒಳಮೀಸಲಾತಿಗೆ ಒತ್ತಾಯಿಸಿ ಮಾರ್ಚ್ 11ರಂದು ಹಲೋ ಮಾದಿಗ, ಚಲೋ ಬೆಂಗಳೂರು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಾವಿರಾರು ಜನರ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಗೋಲಿಬಾರ್ ಮಾಡಲಿ, ಲಾಠಿ ಚಾರ್ಚ್ ಮಾಡಿದರೂ ಅಂಜುವುದಿಲ್ಲ. ಒಳಮೀಸಲಾತಿ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ನರಸಪ್ಪ ಎಚ್ಚರಿಕೆ ನೀಡಿದ್ದಾರೆ.