ಕಲಬುರಗಿ: ಹಳ್ಳದ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ತಹಶೀಲ್ದಾರ್ ಕಾರು ಕೊಚ್ಚಿ ಹೋಗಿದ್ದು, ಪ್ರಾಣ ರಕ್ಷಣೆ ಮಾಡಿಕೊಳ್ಳಲು ಅವರು ಮರವೇರಿ ಕುಳಿತುಕೊಂಡಿದ್ದ ಘಟನೆ ನಡೆದಿದೆ.
ಮೂಲತಃ ಬೀದರ್ ಜಿಲ್ಲೆಯವರಾದ ಪಂಡಿತ್ ಬಿರಾದಾರ್ ಸದ್ಯ ಯಾದಗಿರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕಾರಿನಲ್ಲಿ ಬೀದರ್ಗೆ ತೆರಳುತ್ತಿದ್ದ ಅವರು, ಕಲಬುರಗಿ ಗಣಾಪುರ ಗ್ರಾಮದ ಬಳಿ ಸೇತುವೆ ಮೇಲಿಂದ ರಭಸವಾಗಿ ಹರಿಯುತ್ತಿದ್ದ ನೀರಿನ ಪ್ರವಾಹಕ್ಕೆ ಸಿಲುಕಿ ಕಾರು ಸಮೇತ ನೀರಿನಲ್ಲಿ ಹರಿದುಕೊಂಡು ಹೋಗಿದ್ದಾರೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ತಕ್ಷಣ ಕಾರಿನಿಂದ ಹೊರಬಂದು, ಮರವೇರಿ ಕುಳಿತ್ತಿದ್ದಾರೆ. ತಕ್ಷಣವೇ ಚಿಂಚೋಳಿಯಲ್ಲಿರುವ ತಮ್ಮ ಪರಿಚಯಸ್ಥರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸುದ್ದಿ ಅರಿತು ಸ್ಥಳಕ್ಕೆ ಚಿಂಚೋಳಿ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ದೌಡಾಯಿಸಿ ರಕ್ಷಣಾ ಪಡೆ ಸಹಾಯದಿಂದ ಪಂಡಿತ್ ಬಿರಾದಾರ್ ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.