ಕಲಬುರಗಿ: ಜಿಲ್ಲೆಯಾದ್ಯಂತ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಸೇತುವೆಗಳ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳ ಸಾರಿಗೆ ಸಂಪರ್ಕ ಕಡಿತಗೊಂಡಿದೆ.
ಮನೆಗಳಿಗೆ ಮಳೆ ನೀರು ನುಗ್ಗಿ ಮೂರ್ನಾಲ್ಕು ಅಡಿಯಷ್ಟು ನೀರು ನಿಂತಿದೆ. ಮಳೆ ನೀರಿನಿಂದ ಸಾಕಷ್ಟು ಮನೆಗಳು ಜಲಾವೃತವಾಗಿದ್ದು, ವಿವಿಧ ಸಾಮಗ್ರಿಗಳು ಹಾಳಾಗಿವೆ. ಹೀಗಾಗಿ ಜನರು ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ತೆಲಂಗಾಣ-ಕರ್ನಾಟಕ-ಮಹಾರಾಷ್ಟ್ರ ಮೂರು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಮಳಖೇಡ ಸೇತುವೆ ಮೇಲೆ ಸುಮಾರು ಐದಾರು ಅಡಿಯಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಮಳಖೇಡ ಉತ್ತರಾಧಿ ಮಠ ಜಲಾವೃತಗೊಂಡಿದೆ. ಹಲವು ಗ್ರಾಮಗಳು ನಡು ಗಡ್ಡೆಯಂತಾಗಿವೆ.
ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದಲೂ ನೀರು ಹರಿದು ಬರುತ್ತಿರುವುದರಿಂದ ನಿನ್ನೆಯಿಂದ ಭೀಮಾ ನದಿಗೆ 65 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯ ಹಲವು ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಇನ್ನೂ ಎರಡು ದಿನ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ.