ಕಲಬುರಗಿ: ತೆಲಂಗಾಣದ ಹೈದರಾಬಾದ್ನಿಂದ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು, ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸೌಲಭ್ಯ ದೊರಕಿಸಿಕೊಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಲಾಕ್‌ಡೌನ್ ಹಿನ್ನೆಲೆ ವಾಹನ ಸಂಚಾರ ವ್ಯವಸ್ಥೆ ಇಲ್ಲದೆ 38 ವರ್ಷದ ವ್ಯಕ್ತಿಯೊಬ್ಬ ಹೈದರಾಬಾದ್ನಿಂದ ಸುಮಾರು 280 ಕಿ.ಮೀ ದೂರ ನಡೆದುಕೊಂಡು ನಿನ್ನೆ ರಾತ್ರಿ ಗಂಗಾನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದಾನೆ. ಈ ವಿಷಯ ಅರಿತ ನಗರದ ಆರ್ಜಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅರುಣ ಹಾಗೂ ಸಿಬ್ಬಂದಿ ವ್ಯಕ್ತಿಯ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.
ತಾನೊಬ್ಬ ಕೂಲಿ ಕಾರ್ಮಿಕನಾಗಿದ್ದು, ಹೈದರಾಬಾದ್ನಿಂದ ಕಾಲ್ನಡಿಗೆ ಮೂಲಕ ಮನೆಗೆ ಬಂದಿರುವುದಾಗಿ ಹೇಳಿದ್ದಾನೆ. ಆಗ ಪೊಲೀಸರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಒಂದು ಗಂಟೆಯಾದರೂ ಅಂಬ್ಯುಲೆನ್ಸ್ ಬಂದಿಲ್ಲ, ಆರೋಗ್ಯ ಇಲಾಖೆ ಟಿಹೆಚ್ಒಗೆ ಕರೆ ಮಾಡಿದ್ರೆ ರಾತ್ರಿ ವೇಳೆ ಹೇಗೆ ಬರೋದು ಎಂದು ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಸುಮಾರು ಒಂದೂವರೆ ಗಂಟೆ ನಂತರ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿ ವ್ಯಕ್ತಿಯನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದೆ.