ಕಲಬುರಗಿ: ಈ ಮುಂಚೆ ದೇವೇಗೌಡರು ಅಳುತ್ತಿದ್ದರು, ಈಗ ಕುಮಾರಸ್ವಾಮಿ ತಂದೆಯನ್ನು ಅನುಕರಿಸಿ ಅಳ್ತಿದಾರೆ ಎಂಬ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಯಾರ ಹೇಳಿಕೆ ಬಗ್ಗೆಯೂ ಮಾತಾಡೋಕೆ ಹೋಗಲ್ಲ. ಅದರ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ಯಾರು, ಯಾರನ್ನು ಬೆಳೆಸಿದೆ ಎಂದು ಎಲ್ಲರಿಗೂ ಗೊತ್ತಿದೆ. ಯಾರು ಯಾವ ಪಕ್ಷ ಸೇರಿದ್ದಾರೆ ಅನ್ನೋದು ಗೊತ್ತಿದೆ. ಚುನಾವಣಾ ಸಂದರ್ಭದಲ್ಲಿ ಏನೇನು ಮಾತಾಡ್ತಿದ್ದಾರೆ ಅನ್ನೋದನ್ನೂ ಗಮನಿಸಿದ್ದೇನೆ. ನಾನು ನಿನ್ನೆ ರಾಜಕಾರಣಕ್ಕೆ ಬಂದಿಲ್ಲ. 1970 ರಿಂದಲೂ ಈ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ನನಗೆ ಪಕ್ಷ ಬೆಳೆಸೋದಷ್ಟೇ ಮುಖ್ಯ. ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ಇವರೆಲ್ಲಾ ಹೊರಗೆ ಬಂದ್ರು, ಆದ್ರೆ ನಾನು ಏಕಾಂಗಿಯಾಗಿ ಪಕ್ಷ ಮುನ್ನಡೆಸಿದ್ದೇನೆ. ನಾನು ಯಾರ ಹೆಗಲ ಮೇಲೂ ಕೈಯಿಟ್ಟು ಪಕ್ಷ ಮುನ್ನಡೆಸುತ್ತಿಲ್ಲ. ಇವತ್ತು ಜೆಡಿಎಸ್ ಶಕ್ತಿ ಕಡಿಮೆಯಾಗಿದೆ. ಆದ್ರೆ ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ. ಯಾರು ಎಷ್ಟೇ ಲಘುವಾಗಿ ಮಾತಾಡಿದ್ರೂ ಚುನಾವಣೆ ನಂತರ ಸರಿಯಾದ ಉತ್ತರ ಕೊಡ್ತೇನೆ ಎಂದರು.
ಆರು ಕ್ಷೇತ್ರಕ್ಕೆ ಜೆಡಿಎಸ್ ಏಕಾಂಗಿ ಸ್ಪರ್ಧೆ:
ಕುಮಾರಸ್ವಾಮಿ ಆರೋಗ್ಯ ಹದಗೆಟ್ಟಿದ್ದರಿಂದ ಅವ್ರಿಗೆ ರೆಸ್ಟ್ ಮಾಡೋಕೆ ಹೇಳಿದ್ದಾರೆ. ಹೀಗಾಗಿ ಎಂ.ಎಲ್.ಸಿ ನಾಮಪತ್ರ ಸಲ್ಲಿಕೆಗೆ ನಾನೇ ಬಂದಿದ್ದೇನೆ. ನಾಲ್ಕು ವಿಧಾನ ಪರಿಷತ್ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲಿದೆ. ಪರಿಷತ್ ಹಾಗೂ ವಿಧಾನಸಭೆ ಎರಡರಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.
ಬರಿ ಮೋದಿಯ ಬಗ್ಗೆ ತಪ್ಪುಗಳನ್ನು ಹುಡುಕೋದೇ ನನ್ನ ಕೆಲಸವಲ್ಲ:
ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಗುರಿಯಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿದ ಸಮಸ್ಯೆಗಳೂ ಕಾರಣವಾಗಿದೆ. ಕೊರೊನಾ ಸೋಂಕೂ ಕೂಡಾ ಕಾರಣವಾಗಿದೆ. ಬರೀ ಮೋದಿಯ ಬಗ್ಗೆ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ. ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ ಎಂದರು.
ಇದೇ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೊರೊನಾ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ನಡೀತಿದೆ ಎಂದರು.