ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಾಳೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಂದೇ ವಿದ್ಯಾರ್ಥಿಗಳ ಕೈ ಸೇರಿದ್ದು, ವಿವಿ ಮತ್ತೊಂದು ಯಡವಟ್ಟಿಗೆ ಗುರಿಯಾಗಿದೆ.
ಬಿ.ಎಡ್ ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಮತ್ತು ಗಣಿತದ ಮೆಥಡ್-2 ಪರೀಕ್ಷೆ ಇಂದು ನಡೆಯಬೇಕಿತ್ತು. ಈ ವೇಳೆ ಮೆಥಡ್-2ರ ಪ್ರಶ್ನೆ ಪತ್ರಿಕೆ ಬದಲು ಮೆಥಡ್-1 ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ. ನಾಳೆ ಬರೆಯಬೇಕಿದ್ದ ಪ್ರಶ್ನೆ ಪತ್ರಿಕೆ ಇಂದೇ ಕೈ ಸೇರಿದ್ದಕ್ಕೆ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ. ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ತಂದ ಮೇಲೆ ಪ್ರಮಾದ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ತಕ್ಷಣ ವಿದ್ಯಾರ್ಥಿಗಳಿಂದ ಪ್ರಶ್ನೆ ಪತ್ರಿಕೆ ಮರಳಿ ಪಡೆದು ಇಂದು ನಿಗದಿಯಾಗಿದ್ದ ಮೆಥೆಡ್ 2 ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ.

ಕಲಬುರಗಿ, ಬೀದರ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಪ್ರಶ್ನೆಪತ್ರಿಕೆ ಬಹಿರಂಗ, ಪರೀಕ್ಷಾ ನಕಲು ಇತ್ಯಾದಿಗಳ ಕಾರಣದಿಂದಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇದೆ.