ಕಲಬುರಗಿ: ಕೋವಿಡ್ ಭೀತಿಯಿಂದ ಮುಂದೂಡಲ್ಪಟ್ಟಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಸ್ನಾತಕೋತ್ತರ ಪದವಿ ಸೇರಿ ಇನ್ನಿತರ ಪದವಿ ಕೋರ್ಸ್‍ಗಳ ಮೊದಲನೇ, ಮೂರನೇ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ಇದೇ ಆಗಸ್ಟ್ 2ರಿಂದ ನಡೆಸಲಾಗುತ್ತದೆ ಎಂದು ಗುಲಬರ್ಗಾ ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ್ ಹೇಳಿದ್ದಾರೆ.
ಗುಲಬರ್ಗಾ ವಿವಿಯ ಕಾರ್ಯಸೌಧದ ರಾಧಾಕೃಷ್ಣ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪರಿಷತ್ ಹಾಗೂ ಯುಜಿಸಿಯ ಮಾರ್ಗಸೂಚಿಗಳ ಅನ್ವಯ ಪರೀಕ್ಷೆ ನಡೆಸಲಾಗುತ್ತಿದ್ದು, 4 ಜಿಲ್ಲೆಗಳ ಸುಮಾರು 150 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1 ಲಕ್ಷ 20 ಸಾವಿರ ಪದವಿ ಹಾಗೂ 12 ಸಾವಿರ ಸ್ನಾತಕೋತ್ತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲನೇ, ಮೂರನೇ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಆಧರಿಸಿ 2ನೇ ಹಾಗೂ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಲಾಗುವುದರ ಮೂಲಕ ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. ಇದಲ್ಲದೇ 6ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಹಾಗೂ 4ನೇ ಸೆಮಿಸ್ಟರ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.
ಜುಲೈ 28ರಿಂದ ಬಿಇಡಿ ಪರೀಕ್ಷೆ
ಈಗಾಗಲೇ ತರಗತಿ ಮುಗಿಸಿರುವ ಬಿಇಡಿ ವಿದ್ಯಾರ್ಥಿಗಳಿಗೆ ಇದೇ ಜುಲೈ 28ರಿಂದ ಪರೀಕ್ಷೆಗಳನ್ನು ನಡೆಸಲಾಗುವುದು. ವಿವಿ ವ್ಯಾಪ್ತಿಯ 4 ಜಿಲ್ಲೆಗಳ 9,200 ವಿದ್ಯಾರ್ಥಿಗಳು ಬಿಇಡಿ ಪರೀಕ್ಷೆ ಎದುರಿಸಲು ಸಿದ್ಧರಾಗಿದ್ದು, 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದಿದ್ದಾರೆ.
ಪರೀಕ್ಷೆಗಳು ಯುಜಿಸಿ ಹಾಗೂ ಸರ್ಕಾರದ ಅನುಸಾರದಂತೆ ನಡೆಯಲಿವೆ. ಈಗಾಗಲೇ ಶೇ.70ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.90ರಷ್ಟು ಶಿಕ್ಷಕರು ಕೋವಿಡ್ ಲಸಿಕೆ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರೂ ಸಹ ಕನಿಷ್ಠ ಪಕ್ಷ ಒಂದು ಡೋಸ್ ಲಸಿಕೆ ಪಡೆದಿರಬೇಕು.
ಅದಲ್ಲದೇ ವಿವಿಯ ವ್ಯಾಪ್ತಿಗೆ ಬರುವ 4 ಜಿಲ್ಲೆಗಳ 1.25 ಲಕ್ಷ ವಿದ್ಯಾರ್ಥಿಗಳು 2020-21ನೇ ಸಾಲಿನ ಪರೀಕ್ಷೆಗೆ ಹಾಜರಾಗಲಿದ್ದಾರೆ. ಎನ್ಸಿಇಟಿ ಮಾನ್ಯತೆ ಪಡೆದ ಮಹಾವಿದ್ಯಾಲಯ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.