ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ವಿವಿಧ ಕ್ಷೇತ್ರಗಳಿಗೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ದಿ. ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಕಟಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರೊ.ಎಚ್.ಟಿ.ಪೋತೆ, ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ದಿ. ಹಾ.ಮ.ನಾಯಕ್ ಕುಲಪತಿಗಳಿದ್ದ ವೇಳೆ ಹಿಂದುಳಿದ ಭಾಗದ ಲೇಖಕರನ್ನು ಪ್ರೋತ್ಸಾಹಿಸಲೆಂದು ರಾಜ್ಯೋತ್ಸವ ಪ್ರಶಸ್ತಿ ಆರಂಭಿಸಲಾಯಿತು ಎಂದು ತಿಳಿಸಿದ್ರು.
ದಿ. ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ ಅವರ 'ಹೆಣದ ಮೇವು' ಮತ್ತು ಪ್ರಭುಲಿಂಗ ನೀಲೂರೆ ಅವರ 'ಒಳಿತು ಮಾಡು ಮನುಜ' ಕಥೆಗಳಿಗೆ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಶಸ್ತಿಯ ಚಿನ್ನದ ಪದಕ ಮತ್ತು 5 ಸಾವಿರ ರೂಪಾಯಿ ನಗದು ಒಳಗೊಂಡಿದೆ.
ಗಾಯತ್ರಿ ಸುಂದರೇಶ್ ಅವರ 'ಸೊಪ್ಪೀರಮ್ಮನ ಸಮಾಧಿ ಸುತ್ತ' ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಬೆಳ್ಳಿ ಪದಕ 3 ಸಾವಿರ ರೂಪಾಯಿ ನಗದನ್ನೊಳಗೊಂಡಿದೆ. ಮುದಿರಾಜ್ ಬಾಣದ್ ಅವರ 'ಹೇನು ಕಥೆ' ತೃತೀಯ ಸ್ಥಾನ ಪಡೆದುಕೊಂಡಿದ್ದು, ಕಂಚಿನ ಪದಕ ಹಾಗೂ 2 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.
ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಭಾಷಾ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕುಲಪತಿ ಪ್ರೊ.ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸೃಜನ ವಿಭಾಗದಲ್ಲಿ ಚಿದಾನಂದ ಸಾಲಿ ಅವರ ಮೂರನೇ ಕಣ್ಣು, ಜಯದೇವಿ ಗಾಯಕವಾಡರ ಬೋಧಿ ವೃಕ್ಷದ ಹಾಯಿಕುಗಳು, ಬಸವರಾಜ ಡೋಣೂರು ಅವರ ಕಂಗಳ ಬರ, ಹನುಮಂತರಾವ್ ದೊಡ್ಡಮನಿ ಅವರ ಬಿಸಿಲು ಬೆಳದಿಂಗಳು ಕೃತಿಗಳು ಆಯ್ಕೆಯಾಗಿವೆ.
ಚಿನ್ನ,ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು:
೧.ಹೆಣದ ಮೇವು- ಡಾ.ಶಿವರಾಮ ಅಸುಂಡಿ (ಚಿನ್ನದ ಪದಕ)
೨.ಒಳಿತು ಮಾಡು ಮನುಜ- ಪ್ರಭುಲಿಂಗ್ ನೀಲೂರೆ (ಚಿನ್ನದ ಪದಕ)
೩.ಸೋಪ್ಪಿರಮ್ಮನ ಸಮಾಧಿ ಸುತ್ತ- ಗಾಯತ್ರಿ ಸುಂದರೇಶ್ (ಬೆಳ್ಳಿ ಪದಕ)
೪.ಹೇನು-ಮುದಿರಾಜ್ ಬಾಣದ್ (ಕಂಚಿನ ಪದಕ)