ಕಲಬುರಗಿ: ಒಂದು ಕಡೆ ಗುಲ್ಬರ್ಗ ವಿಶ್ವವಿದ್ಯಾಲಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸಲು ಸಜ್ಜಾಗುತ್ತಿದೆ. ಆದ್ರೆ, ಇನ್ನೊಂದೆಡೆ ವಿವಿ ನಿರ್ಧಾರದ ವಿರುದ್ಧ ಅಪಸ್ವರಗಳು ಎದ್ದಿವೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಪರೀಕ್ಷೆ ನಡೆಸುವುದು ಬೇಡ ಎಂಬ ಕೂಗು ಕೇಳಿಬರುತ್ತಿದೆ.
ವಿವಿ ಆಡಳಿತ ಮಂಡಳಿ ನಿರ್ಧಾರಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ವಿಶ್ವವಿದ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೋವಿಡ್ ಆತಂಕದ ಜೊತೆಗೆ, ಎರಡು ಸೆಮ್ ಪರೀಕ್ಷೆ ಬರೆಯಲು ಕಷ್ಟವಿದೆ. ಅಲ್ಲದೆ ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟದಿಂದ ಹಲವು ವಿದ್ಯಾರ್ಥಿಗಳು ಕುಟುಂಬ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕೆಲಸ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲೇ ವಿವಿ ಆಡಳಿತ ಮಂಡಳಿ ಏಕಕಾಲಕ್ಕೆ ಎರಡು ಸೆಮಿಸ್ಟರ್ ಪರೀಕ್ಷೆ ಬರೆಯಲು ಹೇಳುತ್ತಿದೆ. ಇದು ತುಂಬಾ ಕಷ್ಟ. ಹೀಗಾಗಿ ಸಮಯಾವಕಾಶ ಕೊಟ್ಟು ಒಂದು ಸೆಮ್ ಪರೀಕ್ಷೆ ನಡೆಸಿದ್ರೆ ಸೂಕ್ತ ಎಂದು ವಿದ್ಯಾರ್ಥಿಗಳು ಕೋರಿದ್ದಾರೆ.
2020-21ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯನ್ನು ಸೆಮಿಸ್ಟರ್ ಪ್ರಕಾರವೇ ಎರಡು ಹಂತದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈಗಾಗಲೇ ಪರೀಕ್ಷೆಗಳು ವಿಳಂಬವಾಗಿವೆ. ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಈಗ ಅವರೆಲ್ಲರೂ ಮುಂದಿನ ಸೆಮಿಸ್ಟರ್‌ನ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಎಲ್ಲ ವಿದ್ಯಾರ್ಥಿಗಳ ಭವಿಷ್ಯದ ಉದ್ದೇಶದಿಂದ ಎರಡೂ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿರುವುದಾಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದ್ದಾರೆ.
ಪದವಿ ಹಂತದ 1, 3, 5 ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 1 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಜುಲೈ 15ರಿಂದ ಆರಂಭಿಸಲಾಗುತ್ತದೆ. ಈ ಪರೀಕ್ಷೆಯನ್ನು 25 ದಿನಗಳಲ್ಲಿ ಮುಗಿಸಲಾಗುವುದು. ನಂತರದ 15 ದಿನಗಳಲ್ಲಿ ಎಲ್ಲ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಲಾಗುವುದು.
ಅದೇ ರೀತಿ ಪದವಿ ಹಂತದ 2, 4, 6ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿಯ 2 ಮತ್ತು 4ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಪರೀಕ್ಷೆಯ ಫಲಿತಾಂಶ ನವೆಂಬರ್ 15ರೊಳಗೆ ಪ್ರಕಟಿಸಿ, 2020-21ನೇ ಸಾಲಿನ ಎಲ್ಲ ಪ್ರಕ್ರಿಯೆಗಳನ್ನು ಅಂತ್ಯಗೊಳಿಸಲು ವಿವಿ ತೀರ್ಮಾನಿಸಿದೆ. ಈಗಾಗಲೇ ವಿವಿ ಮಟ್ಟದಲ್ಲಿ ತಾತ್ಕಾಲಿಕವಾದ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.
ಆದರೆ ವಿಶ್ವವಿದ್ಯಾಲಯ ದಿಢೀರ್ ನಿರ್ಧಾರದಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಡಿ ಇಲ್ಲವೇ, ಸಮಯವಕಾಶ ನೀಡಿ ಪರೀಕ್ಷೆ ನಡೆಸಿ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ.