ಕಲಬುರಗಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಣ್ಮೀ ಯೋಜನೆಯಡಿ ಮಾಸಿಕ ನೀಡಲಾಗುವ 2,000 ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ಫಲಾನುಭವಿ ಸಾಲದ ವಸೂಲಾತಿಗೆ ಬಳಕೆ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಮಂಗಳವಾರ ಚಿತ್ತಾಪುರ ತಾಲೂಕಿನ ತರಕಸಪೇಟೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಹಿಳೆಯೊಬ್ಬರು ಯೋಜನೆಯಡಿ ಬಂದ 2,000 ಹಣ ನಾಲವಾರದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಗಿರೀಶ ಅವರು ಸಾಲ ವಸೂಲಾತಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಸಭೆಗೆ ತಿಳಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಯಡಿ ಇದೂವರೆಗೆ ಪಾವತಿ ಮಾಡಿಕೊಂಡ ಹಣ ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಅವರಿಗೆ ಸಚಿವರು ಖಡಕ್ ಸೂಚನೆ ನೀಡಿದರು. ಮಧ್ಯಪ್ರವೇಶಿಸಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬರೀ ಗ್ಯಾರಂಟಿ ಹಣ ಅಷ್ಟs ಅಲ್ಲ. ಸರ್ಕಾರದಿಂದ ನೀಡಲಾಗುವ ವಿವಿಧ ಪರಿಹಾರ, ರೈತರ ಆತ್ಮಹತ್ಯೆ ಪರಿಹಾರದಂಥ ಪ್ರಕರಣದಲ್ಲಿಯೂ ಬ್ಯಾಂಕ್ ಅಧಿಕಾರಿಗಳು ಇದೇ ರೀತಿ ಸಾಲ ವಸೂಲಾತಿ ಮಾಡುತ್ತಿರುವುದು ದುರಾದೃಷ್ಠಕರ. ಇದಕ್ಕೆ ಕಡಿವಾಣ ಹಾಕಬೇಕು. ಕೇವಲ ತರಕಸಪೇಟೆ ಮಾತ್ರವಲ್ಲ ಹೆಬ್ಬಾಳ ಹಾಗೂ ಕಾಳಗಿಯಲ್ಲಿಯೂ ಕೂಡಾ ಈ ತರಹ ಪ್ರಕರಣ ನಡೆದಿವೆ ಎಂದು ಆಗ್ರಹಿಸಿದರು.
ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಸಭೆ ಕರೆದು ಸರ್ಕಾರ ಆದೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಸಲಹೆ ನೀಡಿದರು.
ಬೆಳೆ ವಿಮೆ ಪರಿಹಾರ: ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹಿಂದೆಲ್ಲ ಬೆಳೆ ವಿಮೆ ಪರಿಹಾರ ಲೆಕ್ಕಕ್ಕಿರಲಿಲ್ಲ. ಈ ಬಾರಿ ವಿಮಾ ಕಂಪನಿ ಅವರೊಂದಿಗೆ ಸತತ ಸಂಪರ್ಕ ಸಾಧಿಸಿ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಗ್ರೌಂಡ್ ಟ್ರುತ್ ರಿಪೋರ್ಟ್ ಆಧಾರದ ಮೇಲೆ ಪರಿಹಾರ ನೀಲಾಗುತ್ತಿದೆ ಎಂದರು.
ಆಗ ಮಧ್ಯಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಬೆಳೆ ಕಟಾವು ಪ್ರಯೋಗ ಸರಿಯಾಗಿ ಆಗಬೇಕು. ಯಾಕೆಂದರೆ, ಬೆಳೆ ಪರಿಹಾರ ಆ ಪ್ರಯೋಗದ ಮೇಲೆ ಅವಲಂಬಿಸಿದೆ. ಈ ಪ್ರಯೋಗದಲ್ಲಿ ಏನಾದರೂ ಅಸಮರ್ಥತೆ ಕಂಡುಬಂದರೆ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದ ಅವರು ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರು, ತಹಸೀಲ್ದಾರರು, ಕೃಷಿ-ತೋಟಗಾರಿಕೆ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಖಾರೀಫ್‌ನಲ್ಲಿ 1,65,854 ಜನ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿದ್ದು, 1,91,482.49 ಹೆಕ್ಟೇರ್ ಪ್ರದೇಶ ಇದರಲ್ಲಿ ಸೇರಿಕೊಂಡಿದೆ. 2023-24ನೆ ಸಾಲಿನಲ್ಲಿ ಬೆಳೆ ವಿಮೆ ಮಾಡಿಕೊಂಡ ರೈತರ ಪೈಕಿ ಸ್ಥಳೀಯ ವಿಕೋಪ ಪರಿಹಾರದಡಿ 47,173 ದೂರು ಸಲ್ಲಿಸಿದ್ದು, 12,636 ರೈತರಿಗೆ 4.98 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಳೆದ 2022-23ನೇ ಸಾಲಿನಲ್ಲಿ 1,38,355 ರೈತರಿಗೆ 108 ಕೋಟಿ ರೂ. ಪರಿಹಾರ ಸಿಕ್ಕಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ 17 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 16 ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಬಾಕಿ ಒಂದು ಪ್ರಕರಣದ ಎಫ್‌ಎಸ್‌ಎಲ್ ವರದಿ ಬರಬೇಕಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು.
257.40 ಕೋಟಿಗೆ ಪ್ರಸ್ತಾವನೆ ಸಲ್ಲಿಕೆ: ಪ್ರಸಕ್ತ 2023-24ನೇ ಸಾಲಿನಲ್ಲಿ ಮಳೆ ಅಭಾವ ಕಾರಣ ಜಿಲ್ಲೆಯ 11 ತಾಲೂಕು ಬರಗಾಲ ಪೀಡಿತ ತಾಲೂಕು ಘೋಷಣೆಯಾಗಿದೆ. ತೊಗರಿ 867.61 ಕೋಟಿ ರೂ., ಕಬ್ಬು 436.88 ಕೋಟಿ ರೂ., ಸೋಯಾಬಿನ್ 91 ಕೋಟಿ ರೂ. ಸೇರಿದಂತೆ 1,755.52 ಕೋಟಿ ರೂ.ಬೆಳೆ ನಷ್ಟವಾಗಿದ್ದು, ಆರಂಭಿಕವಾಗಿ 282896 ರೈತರ 2,76,368 ರೂ.ಇನ್ಪುಟ್ ಸಬ್ಸಿಡಿ ವಿತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಮದ್ ಪಟೇಲ್ ಸಭೆಗೆ ಮಾಹಿತಿ ನೀಡಿದರು.
ಪಶುಸಂಗೋಪನಾ ಇಲಾಖೆ ಚರ್ಚೆಯಲ್ಲಿ ಕೆಎಂಎಫ್ ತನ್ನ ಬೇಡಿಕೆ ತಕ್ಕಂತೆ ಹಾಲು ಉತ್ಪಾದನೆ ಮಾಡುತ್ತಿಲ್ಲ. ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಒಟ್ಟು 5 ಲಕ್ಷ ಲೀಟರ್ ಬೇಡಿಕೆ ಇದ್ದು 80,000 ಲೀಟರ್ ಮಾತ್ರ ಉತ್ಪಾದನೆಯಾಗುತ್ತಿದೆ ಎಂದು ಕೆಡಿಪಿ ಸಭೆಗೆ ಕೆಎಂಎಫ್ ಅಧಿಕಾರಿ ರವಿಂದ್ರ ಕುಮಾರ ಬಿರಾದಾರ ತಿಳಿಸಿದರು.
ಇದನ್ನೂಓದಿ: ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಳ: ಪ್ರತಿಪಕ್ಷ ನಾಯಕ ಆರ್.ಅಶೋಕ್