ಕಲಬುರಗಿ: ಪಕ್ಕದ ಮಹಾರಾಷ್ಟ್ರದಲ್ಲಿ ಮರುಭೂಮಿ ಮಿಡತೆಗಳ ಹಾವಳಿ ಕಂಡು ಬಂದಿದ್ದು, ಯಾವುದೇ ಸಂದರ್ಭದಲ್ಲಿ ಜಿಲ್ಲೆಗೂ ನುಗ್ಗಿ ಕೃಷಿಗೆ ಹಾನಿ ಮಾಡುವ ಸಾಧ್ಯತೆ ಇದೆ.
ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಬೆಳೆಗಳು ಕಟಾವು ಹಂತದಲ್ಲಿದ್ದು, ತೋಟಗಾರಿಕೆ ಹಾಗೂ ಅರಣ್ಯದಲ್ಲಿನ ಗಿಡಮರಗಳು ಮಿಡತೆಗಳಿಂದ ಹಾನಿಗೊಳಗಾಗುವ ಆತಂಕ ಇದೆ. ಮಿಡತೆಗಳ ಹಾವಳಿ ಹತೋಟಿಗಾಗಿ ಜಿಲ್ಲೆಯ ರೈತರು ವಿವಿಧ ಹಂತದಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಸಲಹೆ ನೀಡಿದ್ದಾರೆ.
ಮೊಟ್ಟೆಗಳನ್ನು ನಾಶಪಡಿಸುವುದು:
ಮಿಡತೆಗಳು ಮೊಟ್ಟೆ ಇಡುವ ಜಾಗ ಗುರುತಿಸಿ ಅವುಗಳ ಸುತ್ತಲು ಕಂದಕ (2 ಅಡಿ ಅಗಲ ಮತ್ತು 2 ಅಡಿ ಆಳ)ವನ್ನು ನಿರ್ಮಿಸಿ ಮೊಟ್ಟೆಯಿಂದ ಬರುವ ಮರಿಗಳನ್ನು ಆ ಕಂದಕಗಳಲ್ಲಿ ಬೀಳುವಂತೆ ಮಾಡುವುದು. ಅಲ್ಲದೆ ಮೊಟ್ಟೆಗಳನ್ನು ನಾಶಪಡಿಸಲು ಮೇಲಿಂದ ಮೇಲೆ ಉಳುಮೆ ಮಾಡಬೇಕು. ರೈತರು ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರಿ ಶಬ್ದ ಮಾಡಬೇಕು.
ರೈತರು ಕಡ್ಡಾಯವಾಗಿ ಮೈ ತುಂಬಾ ಬಟ್ಟೆ ಧರಿಸಿ, ಮುಖಕ್ಕೆ ಮಾಸ್ಕ್, ಕೈ ಚೀಲ, ಟೋಪಿ ಹಾಗೂ ಕನ್ನಡಕ ಧರಿಸಿ ಬೆಳಗ್ಗೆ 7ರಿಂದ 10 ಗಂಟೆಯೊಳಗಾಗಿ 500 ಮಿಲಿ ಲೀ. ಡಿಡಿವಿಪಿ, 76 % ಇಸಿಯನ್ನು 1500 ಲೀಟರ್ ನೀರಿಗೆ ಬೆರೆಸಿ ಅಥವಾ 100 ಕೆ.ಜಿ. ಮರಳಿನ ಜೊತೆ ಬೆರೆಸಿ ಎರಚುವುದು. ಈ ಪುಡಿಯನ್ನು ಚೆಲ್ಲಿದ ನಂತರ ಕೂಡಲೇ ರೈತರು ಹೊಲದಿಂದ ಹೊರಬರುವುದು. ಬಲಿಯುತ್ತಿರುವ ಮಿಡತೆಗಳು ಹೊಲದಲ್ಲಿ ಓಡಾಡುವಾಗ ಒಣಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಚ್ಚಿ ಸುಡುವುದು.
ದಿನದಲ್ಲಿ 150 ಕಿ.ಮೀ. ದೂರ ಗಾಳಿಯಲ್ಲಿ ಹಾರಾಟ:
ಉತ್ತರ ಭಾರತದಲ್ಲಿನ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಮಿಡತೆಯ ಹಾವಳಿ ಉಲ್ಬಣವಾಗಿದ್ದು, ಪೂರ್ವ ಮಹಾರಾಷ್ಟ್ರದ ಭಾಗದಲ್ಲಿಯೂ ಹರಡುತ್ತಿದೆ. ಈ ಮಿಡತೆಗಳು ಅಲೆ ಅಲೆಯಾಗಿ ಗುಂಪಿನಲ್ಲಿ ಒಂದು ದಿನದಲ್ಲಿ 150 ಕಿ.ಮೀ. ದೂರ ಗಾಳಿಯ ದಿಕ್ಕಿನಲ್ಲಿ ಹಾರಬಲ್ಲವು. ಒಂದು ಮಿಡತೆಯು ತನ್ನಷ್ಟೆ ತೂಕದ ಆಹಾರವನ್ನು ತಿನ್ನಬಲ್ಲವು. ಎಫ್ಪಿಓ ವರದಿ ಪ್ರಕಾರ ಒಂದು ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡ ಈ ಮಿಡತೆಗಳ ಸೈನ್ಯ (ಸುಮಾರು 40 ಮಿಲಿಯನ್) ಒಂದು ದಿನದಲ್ಲಿ 35,000 ಸಾವಿರ ಜನರು ತಿನ್ನುವಷ್ಟು ಆಹಾರವನ್ನು ತಿನ್ನಬಲ್ಲವು.