ಕಲಬುರಗಿ: ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಭೀತಿಯಿಂದಾಗಿ ಆನ್ ಲೈನ್ ಶಿಕ್ಷಣದ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ, ಚಿಕ್ಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದು ಸೂಕ್ತವಲ್ಲ. ಇದು ಮುಖ್ಯ ಬೋಧನೆಯಾಗಲ್ಲ. ಅದೊಂದು ಪೂರಕವಾದ ಬೋಧನೆಯಾಗುತ್ತೆ. ಹೀಗಾಗಿ ಆನ್ ಲೈನ್ ಶಿಕ್ಷಣಕ್ಕೆ ಸರ್ಕಾರದ ಸಮ್ಮತಿಯಿಲ್ಲ ಎಂದಿದ್ದಾರೆ.
ಶಾಲೆ ಪ್ರಾರಂಭದ ಕುರಿತು, ಶಿಕ್ಷಣ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹಿಸಿ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕೊರೊನಾ ಪೀಡಿತ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ವಾಸವಾಗಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಒಪ್ಪಿಗೆ ಪಡೆದು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದರು.
ಪರೀಕ್ಷೆ ಕೇಂದ್ರದಲ್ಲಿ ಮುನ್ನೆಚ್ಚರಿಕೆ ಕ್ರಮ:
ಈ ಬಾರಿ ಒಟ್ಟು 8,48,203 ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು. ಎಲ್ಲ ರೀತಿಯ ಪೂರ್ವ ಸಿದ್ಧತೆಗಳು ಸ್ಯಾನಿಟೈಸರ್ ಮತ್ತು ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗುವುದು. ಮಕ್ಕಳ ಸುರಕ್ಷತೆ ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಪರೀಕ್ಷಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಎಸ್ಎಸ್ಎಲ್ಸಿ ಮಕ್ಕಳಿಗೆ ಪುನರ್ ಮನನ ಕಾರ್ಯಕ್ರಮ:
ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ಅಭ್ಯಾಸ ಮಾಡಲು ಸುಲಭವಾಗಲಿ ಎಂದು ಜೂನ್ 10 ರಿಂದ 20 ರವರೆಗೆ ಪರೀಕ್ಷೆ ಪುನರ್ ಮನನ ಕಾರ್ಯಕ್ರಮ ನಡೆಸಲಾಗುವುದು ಎಂದು ಸಚಿವರು ಹೇಳಿದರು.