ಕಲಬುರಗಿ: ಆಗಾಗ್ಗೆ ಕೈಕೊಡುವ ಮಳೆ, ಬಿತ್ತಿದ ಬೆಳೆ ಕೈಗೆ ಬಾರದಿರುವುದು. ಬೆಳೆ ಬಂದರೂ ಸಮರ್ಪಕ ಬೆಲೆ ಸಿಗದೆ ಪರಿತಪಿಸುವ ರೈತರ ನಡುವೆ ಇಲ್ಲೊಬ್ಬರು ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆದರೆ ತಮ್ಮ ಜಮೀನಿನಲ್ಲಿ ಲಾಭದಾಯಕ ಬೆಳೆ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮೂಲಕ ಕೈತುಂಬ ಹಣ ಸಂಪಾದಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ. ಎಂಜಿನಿಯರ್ ಖಾಸಗಿ ಕಂಪನಿ ನೌಕರಿಗೆ ಗುಡ್ಬೈ ಹೇಳಿ ಪ್ರಗತಿಪರ ರೈತನಾಗಿರುವ ಟೆಕ್ಕಿಯ ಯಶೋಗಾಥೆಯ ಸಂಪೂರ್ಣ ಮಾಹಿತಿಯನ್ನು ಈಟಿವಿ ಭಾರತ ನಿಮಗೆ ನೀಡುತ್ತಿದೆ.
ಹೌದು.. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗಡಿ ಪ್ರದೇಶವಾದ ಇಟಕಾಲ್ ಗ್ರಾಮದ ರೈತ ಮಹೇಂದ್ರ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಬಂಪರ್ ಆದಾಯ ಗಳಿಸಿದ್ದಾರೆ. ಬಿ ಇ ಎಂಜಿನಿಯರಿಂಗ್ ಪದವಿ ಓದಿರುವ ಮಹೇಂದ್ರ ಅವರು ಪಕ್ಕದ ರಾಜ್ಯ ತೆಲಂಗಾಣದ ರಾಜಾಧಾನಿ ಹೈದರಾಬಾದ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸಿ, ಕೊರೋನಾ ಸಮಯದಲ್ಲಿ ವರ್ಕಫ್ರಂ ಹೋಮ್ ಕೆಲಸವನ್ನು ಕಂಪನಿ ನೀಡಿತು. ಆದರೆ ಕೊರೊನಾ ಸಂದರ್ಭದಲ್ಲಿ ಮರಳಿ ತಮ್ಮೂರಿಗೆ ಬಂದಿದ್ದ ಮಹೇಂದ್ರ ಅವರಿಗೆ ಮನೆಯಲ್ಲೇ ಕಾಲ ಕಳೆಯುವಾಗ ಯಾಕೆ ಇಲ್ಲಿರುವಷ್ಟು ದಿನ ಕೃಷಿಯ ಕಡೆ ಗಮನಹರಿಸಬಾರದು ಎಂಬ ಆಲೋಚನೆ ಮೂಡಿತು.
ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಅನುಭವ ಹೊಂದಿದ್ದ ಮಹೇಂದ್ರ ಅವರು ಸ್ನೇಹಿತರ, ಪರಿಚಯಸ್ಥರ ಸಲಹೆ ಮೇರೆಗೆ ಬೇರೆಯವರ ಜಮೀನುಗಳಿಗೆ ತೆರಳಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯುವ ಕುರಿತಾಗಿ ಮಾಹಿತಿ ಕಲೆ ಹಾಕಿದರು. ಕೊನೆಗೆ ತಮ್ಮ ಒಂದು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ನಿರ್ಧರಿಸುತ್ತಾರೆ. ಆರಂಭದಲ್ಲಿ ಅಂದಾಜು 3 ಲಕ್ಷ ರೂ. ವರೆಗೆ ಹಣ ಖರ್ಚು ಮಾಡಿದ ಅವರಿಗೆ ವರ್ಷದಲ್ಲೇ ಡ್ರ್ಯಾಗನ್ ಫ್ರೂಟ್ ಹಣ್ಣಿನ ಬೆಳೆ ಹುಲುಸಾಗಿ ಬೆಳೆದು ಕಾಯಿ ಬಿಡಲು ಪ್ರಾರಂಭಿಸುತ್ತದೆ. ನಂತರ ಅದು ಹಣ್ಣಿಗೆ ಬಂದು ಮಹೇಂದ್ರ ಅವರಿಗೆ ವಾರ್ಷಿಕ ಡ್ರ್ಯಾಗನ್ ಫ್ರೂಟ್ ಫಲದ ಆದಾಯ 12 ರಿಂದ ರಿಂದ 13 ಲಕ್ಷ ರೂಪಾಯಿ ಕೈಗೆ ಸಿಗುತ್ತಿದೆ.
ರೈತರಿಗೆ ಡ್ರ್ಯಾಗನ್ ಫ್ರೂಟ್ ಉತ್ತಮ ಆದಾಯದ ಬೆಳೆ: ಎರಡು ವರ್ಷಗಳ ಹಿಂದೆ ಕೊರೋನಾ ಸಮಯದಲ್ಲಿ ವರ್ಕಫ್ರಂ ಹೋಮ್ ಕೆಲಸ ಮಾಡುತ್ತಿದ್ದಾಗ ಒಂದು ದಿನಪತ್ರಿಕೆಯಲ್ಲಿ ಡ್ರ್ಯಾಗನ್ ಫ್ರೂಟ್ ಬಗ್ಗೆ ಓದಿದ್ದೆವು. ಡ್ರ್ಯಾಗನ್ ಫ್ರೂಟ್ಗೆ ಒಣಭೂಮಿ ಬೇಕು, ಕಡಿಮೆ ನೀರು ಇದ್ದರೂ ಬೆಳೆಯುತ್ತದೆ ಅನ್ನೋದು ಗೊತ್ತಾಯಿತು. ಡ್ರ್ಯಾಗನ್ ಫ್ರೂಟ್ ಬಗ್ಗೆ ಮತ್ತಷ್ಟು ರಿಸರ್ಚ್ ಮಾಡಿ, ವಿವಿಧ ಜಮೀನುಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದೆನು. ನನ್ನದು 9 ಎಕರೆ ಜಮೀನು ಇದ್ದರೂ ಒಂದು ಎಕರೆಯಲ್ಲಿ ಮಾತ್ರ ಮೊದಲು ಒಂದು ಉತ್ತಮ ತಳಿ ಆಯ್ಕೆ ಮಾಡಿದೆ. ಡ್ರ್ಯಾಗನ್ ಫ್ರೂಟ್ದಲ್ಲಿ 150 -153 ತಳಿಗಳು ಇವೆ. ಡ್ರ್ಯಾಗನ್ ಫ್ರೂಟ್ದಲ್ಲಿ ತಳಿ ಆಯ್ಕೆ ಆದರ ಮೇಲೆ ಇಳುವರಿ ಬರುತ್ತದೆ.
ಸ್ಹಿಂಬ್ರೇಡ್ ಎಂಬ ತಳಿಯನ್ನೂ ಆಯ್ಕೆ ಮಾಡಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಪ್ರಾರಂಭಿಸಿದರೆ. ಮೊದಲ ಬೆಳೆಯ ಕಟಾವಿನಲ್ಲಿ 3 ಟನ್ ಇಳುವರಿ ಪಡೆದಿರುವೆ. ಎರಡನೆ ಕಟಾವಿನಲ್ಲಿ 8 ಟನ್ ಡ್ರ್ಯಾಗನ್ ಫ್ರೂಟ್ ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಮಾರುಕಟ್ಟೆ ಬೆಲೆ 100 ಇದ್ದರೆ ಅಂದಾಜು ವಾರ್ಷಿಕ 12 ರಿಂದ 13 ಲಕ್ಷ ರೂಪಾಯಿ ಅದಾಯ ಪಡೆಯಬಹುದು. ಮುಂದಿನ ವರ್ಷ ಇದರ ಆದಾಯ ದುಪ್ಪಟ್ಟು ಆಗಬಹುದು ಎನ್ನುತ್ತಾರೆ ರೈತ ಮಹೇಂದ್ರ.
ಸಾಫ್ಟ್ವೇರ್ ಎಂಜಿನಿಯರಾದರೂ ಕೃಷಿ ಜರ್ನಿ ಇದೀಗ ಮಹೇಂದ್ರ ಅವರನ್ನು ಅಲ್ಪಾವಧಿಯಲ್ಲಿ ಶ್ರೀಮಂತ ರೈತರನ್ನಾಗಿಸಿದೆ. ಈಗ ತಮ್ಮ ಎಂಜಿನಿಯರಿಂಗ್ ವೃತ್ತಿಗೆ ಗುಡ್ ಬೈ ಹೇಳಿ ಸಂಪೂರ್ಣ ಕೃಷಿಯನ್ನೇ ಫುಲ್ ಟೈಬ್ ಜಾಬ್ ಮಾಡಿಕೊಂಡಿದ್ದಾರೆ.
ಹೆಸರಿಗಷ್ಟೇ ಕೃಷಿ ಮಾಡುವುದಾದರೆ ಮಹೇಂದ್ರ ಸಾಂಪ್ರದಾಯಿಕ ಬೆಳೆ ಬೆಳೆದು ಬಂದ್ ದುಡ್ಡಿನಲ್ಲಿ ಬದುಕಿನ ಬಂಡಿ ಸಾಗಿಸಬಹುದಿತ್ತು. ಕೃಷಿಯಲ್ಲಿ ಏನಾದರೂ ಹೊಸತನ್ನು ಮಾಡಿ ಹೆಚ್ಚು ಆದಾಯ ಗಳಿಸಬೇಕೆಂದು ಮುನ್ನಡೆದ ಎಂಜಿನಿಯರ್ ಮಹೇಂದ್ರ ಅವರಿಗೆ ಡ್ರ್ಯಾಗನ್ ಫ್ರೂಟ್ ಬೆಳೆ ಬಂಪರ್ ಆದಾಯ ತಂದುಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳಿ, ರೈತರು ಮಕ್ಕಳು ನಗರದತ್ತ ಮುಖ ಮಾಡುತ್ತಿರುವಾಗ ಮಹೇಂದ್ರ ಅವರ ಕೃಷಿಯಡೆಗಿನ ನಡೆ ಮಾದರಿ ಇತರರಿಗೆ ಮಾದರಿ ಎನಿಸಿದೆ.
ಇದನ್ನೂಓದಿ:ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್ ಕ್ವೀನ್!