ಕಲಬುರಗಿ: ಚೇಳು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯಾ ಮಲ್ಲಪ್ಪ (11) ಮೃತ ಬಾಲಕಿಯಾಗಿದ್ದು, ಫೆಬ್ರವರಿ 29ರಂದು ಚೇಳು ಕಡಿದ ಪರಿಣಾಮ ಸೇಡಂ ತಾಲೂಕು ಆಸ್ಪತ್ರೆಗೆ ಬಾಲಕಿಯನ್ನು ದಾಖಲು ಮಾಡಲಾಗಿತ್ತು. ನಂತರ ಕಲಬುರಗಿಯ ಆಸ್ಪತ್ರೆಗೆ ಕಳುಹಿಸಿದ್ದು, ನಿನ್ನೆ ಬಾಲಕಿ ಸಾವನ್ನಪ್ಪಿದ್ದಾಳೆ.
ಇನ್ನು ಸೇಡಂ ತಾಲೂಕಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ತಮ್ಮ ಮಗಳು ಸಾವನ್ನಪ್ಪಿದ್ದಾಳೆಂದು ಪಾಲಕರು ಮತ್ತು ಸ್ಥಳೀಯರು ಸೇಡಂ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಸೇಡಂ ತಾಲೂಕು ಆಸ್ಪತ್ರೆಗೆ ದಾಖಲಾದಾಗ ಸೂಕ್ತ ಸ್ಪಂದನೆ ಸಿಗಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಇದ್ದರೂ ಬೇಗ ಕಳಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಸುಶೀಲ್ ಕುಮಾರ್ ಸಂಧಾನಕ್ಕೂ ಮಣಿಯದೆ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಿರೆ. ಬಾಲಕಿಯ ಸಾವಿಗೆ ಕಾರಣರಾದ ವೈದ್ಯೆಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.