ಕಲಬುರಗಿ: ಮಹಾರಾಷ್ಟ್ರದ ಗಾಂಜಾ ದಂಧೆಕೋರರು ಕರ್ನಾಟಕ ಪೊಲೀಸರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ದಂಧೆ ಬೇಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಗಾಂಜಾ ದಂಧೆಕೋರರ ಗ್ಯಾಂಗ್ ದಾಳಿ ಮಾಡಿದ್ದು, ಕಲಬುರಗಿ ಜಿಲ್ಲೆ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸ್ಥಿತಿ ಚಿಂತಾಜನಕವಾಗಿದೆ.
ಕಲ್ಲು ಕಟ್ಟಿಗೆ ಸಮೇತ ಪೊಲೀಸರ ಮೇಲೆ ದಾಳಿಗಿಳಿದ ಗಾಂಜಾ ಗ್ಯಾಂಗ್: ಕಳೆದ ಮೂರು ದಿನಗಳ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಂತೋಷ ಎಂಬಾತನನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಗಾಂಜಾ ದಂಧೆಯ ಮೂಲ ಭೇದಿಸಲು ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 10 ಜನರ ತಂಡ, ಆರೋಪಿ ಸಂತೋಷನನ್ನು ಕರೆದುಕೊಂಡು ಶುಕ್ರವಾರ ಮಹಾರಾಷ್ಟ್ರದ ಉಮರ್ಗ ಜಿಲ್ಲೆಯ ತರೂರವಾಡಿ - ಕರ್ನಾಟಕದ ಹೊನ್ನಾಳಿ ಗ್ರಾಮದ ಮದ್ಯದಲ್ಲಿರುವ ಜಮೀನೊಂದಕ್ಕೆ ತೆರಳಿತ್ತು.
ಅಂತೆಯೇ ರಾತ್ರಿ ಸುಮಾರು 8.30ರ ವೇಳೆಗೆ ಪೊಲೀಸ್ ತಂಡ ಗಾಂಜಾ ಬೆಳೆದಿದ್ದ ಹೊಲಕ್ಕೆ ಹೋಗಿ ಅಪಾರ ಪ್ರಮಾಣದ ಗಾಂಜಾ ಇರುವದನ್ನು ಪತ್ತೆ ಮಾಡಿ ಕಾರ್ಯಚರಣೆಗೆ ಇಳಿದಿತ್ತು. ಈ ವೇಳೆ ಕಟ್ಟಿಗೆ ಕಲ್ಲುಗಳ ಸಮೇತ ಆಗಮಿಸಿದ ಸುಮಾರು 40 ಜನರಿರುವ ಗಾಂಜಾ ದಂದೆಕೋರರ ಗ್ಯಾಂಗ್ ಪೊಲೀಸರ ಮೇಲೆಯೇ ತಿರುಗಿ ಬಿದ್ದಿದೆ. ಜೀವ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ, ಸಿಪಿಐ ಶ್ರೀಮಂತ ಇಲ್ಲಾಳ ಗಾಂಜಾ ಗ್ಯಾಂಗ್ ಕೈಯಲ್ಲಿ ಸಿಕ್ಕಿದ್ದು ಮನಬಂದಂತೆ ಹಲ್ಲೆಗೈದು ಅಟ್ಟಹಾಸ ಮೆರೆದಿದ್ದಾರೆ.
ತಡರಾತ್ರಿ 2 ಗಂಟೆಗೆ ಸಿಪಿಐ ಇಲ್ಲಾಳ ಆಸ್ಪತ್ರೆ ದಾಖಲು: ಸಿಪಿಐ ಶ್ರೀಮಂತ ಇಲ್ಲಾಳ ರಕ್ತಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಉಳಿದ ಪೊಲೀಸರು ಮಂಠಾಳ ಮತ್ತು ಉಮರ್ಗಾ ಠಾಣೆ ಪೊಲೀಸರ ಸಹಾಯದಿಂದ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಸಿಪಿಐ ಇಲ್ಲಾಳ ಅವರನ್ನು ಬಸವಕಲ್ಯಾಣದಲ್ಲಿ ಚಿಕಿತ್ಸೆ ಕೊಡಿಸಿ ತಡರಾತ್ರಿ ಸುಮಾರು 2ರ ವೇಳೆಗೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಹಲ್ಲೆಗೊಳಗಾದ ಸಿಪಿಐ ಇಲ್ಲಾಳಗೆ ಸೂಕ್ತ ಚಿಕಿತ್ಸೆಗೆ ಗೃಹ ಸಚಿವರ ಸೂಚನೆ : ಎಸ್ಪಿ ಇಶಾ ಪಂತ್
ಅವರಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಐಜಿಪಿ ಮನೀಷ್ ಖರ್ಬಿಕರ್, ಎಸ್ಪಿ ಇಶಾ ಪಂತ್, ಡಿಸಿ ಯಶವಂತ ಗುರುಕರ್ ಆಸ್ಪತ್ರೆಗೆ ಭೇಟಿ ನೀಡಿ ಸಿಪಿಐ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದು, ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.
ಪುಡಿಯಾದ ಎಲಬು- ಹೊಟ್ಟೆಯಲ್ಲಿ ಗಂಭೀರಗಾಯ: ಇಲ್ಲಾಳ ಅವರ ತಲೆ, ಎದೆ, ಹೊಟ್ಟೆ ಮತ್ತು ಮುಖ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಪಕ್ಕೆಲುಬು ಮುರಿದಿದ್ದು, ಮುಖ ಭಾಗದಲ್ಲೂ ಮುಳೆ ಮುರಿದಿದೆ. ಹೊಟ್ಟೆಯ ಒಳಭಾಗದಲ್ಲಿ ಗಂಭೀರ ಪ್ರಮಾಣದ ಗಾಯಳಾಗಿವೆ. ಐಸಿಯುನಲ್ಲಿ ಅವರನ್ನು ವೆಂಟಿಕೇಟರ್ನಲ್ಲಿ ಇರಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಿಪಿಐ ಶ್ರೀಮಂತ ಇಲ್ಲಾಳ ಅವರ ಸ್ಥಿತಿ ಬಗ್ಗೆ 24 ಗಂಟೆಗಳ ಕಾಲ ಏನು ಹೇಳಕಾಗೋದಿಲ್ಲ ಅಂತ ವೈದ್ಯರು ಹೇಳಿದ್ದಾರೆ.
ಹಿಂದೆಯೂ ಪೊಲೀಸರ ಮೇಲೆ ಗಾಂಜಾ ದಂದೆಕೋರರ ದಾಳಿ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಗಾಂಜಾ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಗರದ ಹೊರವಲಯ ತಾವರಗೇರಾ ಬಳಿ ಗಾಂಜಾ ದಂಧೆಕೋರರನ್ನ ಹೆಡೆಮುರಿ ಕಟ್ಟಲು ಹೋಗಿದ್ದ ಸೆನ್ ಠಾಣೆ ಇನ್ಸ್ಪೆಕ್ಟರ್ ವಾಹೀದ್ ಕೊತ್ವಾಲ್ ನೇತೃತ್ವದ ತಂಡದ ಮೇಲೂ ದಾಳಿಗೆ ಮುಂದಾಗಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್ಪೆಕ್ಟರ್ ಸ್ಥಿತಿ ಚಿಂತಾಜನಕ
ಆಗ ದಂಧೆಕೋರರ ಕಾಲಿಗೆ ಗುಂಡು ಹೊಡೆದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ, ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ, ಜಿಲ್ಲೆಯ ಚಿತ್ತಾಪುರ ತಾಲೂಕಿನ ಗ್ರಾಮವೊಂದರಲ್ಲಿ ಜಮೀನಲ್ಲಿ ಹುದುಗಿಸಿಟ್ಟಿದ್ದ 1000ಕ್ಕೂ ಹೆಚ್ಚು ಕೆಜಿ ಗಾಂಜಾ ಪ್ಯಾಕೇಟ್ಗಳನ್ನು, ಬೆಂಗಳೂರು ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದರು. ಈಗ ಸಿಪಿಐ ಇಲ್ಲಾಳ ಅವರ ಮೇಲೆ ಗಾಂಜಾ ದಂಧೆಕೋರರು ಮಾರಕ ದಾಳಿ ಮಾಡಿದ್ದಾರೆ.
ಸೂಕ್ತ ಚಿಕಿತ್ಸೆಗೆ ಕುಟಂಬದ ಆಗ್ರಹ: ದಾಳಿ ಖಂಡಿಸಿ ಕುಟುಂಬ ಹಾಗೂ ಸಮುದಾಯದವರು ಆಸ್ಪತ್ರೆ ಮುಂಭಾಗದ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಡಿಸಿ, ಎಸ್ಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಇಲ್ಲಾಳ ಅವರನ್ನ ಏರ್ ಲಿಫ್ಟ್ ಮೂಲಕ ಬೆಂಗಳೂರು ಅಥವಾ ಹೈದರಾಬಾದ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಸಿಪಿಐ ಶ್ರೀಮಂತ ಇಲ್ಲಾಳಗೆ ಗುಣಮಟ್ಟದ ಚಿಕಿತ್ಸೆ ನೀಡಿ.. ಕುರುಬ ಸಮುದಾಯದಿಂದ ಪ್ರತಿಭಟನೆ