ಕಲಬುರಗಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ದೊಡ್ಡ ಫ್ರಾಡ್ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ವಿಮಾ ಯೋಜನೆ ಸರ್ಕಾರದ ವ್ಯಾಪ್ತಿಯಲ್ಲಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಬಿಮಾ ಯೋಜನೆ ಖಾಸಗೀಕರಣ ಮಾಡಲಾಗಿದೆ. ಇದರಿಂದ ಯಾವುದೇ ರೈತರಿಗೆ ಬಿಮಾ ಯೋಜನೆ ಫಲ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯೊಂದರಲ್ಲಿಯೇ 2016ರಿಂದ ಇಲ್ಲಿವರೆಗೆ 221 ಕೋಟಿ ರೂಪಾಯಿ ವಿಮಾ ಕಂತು ಕಟ್ಟಲಾಗಿದೆ. ಆದರೆ, ಪರಿಹಾರ ಸಿಕ್ಕಿರೋದು ಕೇವಲ 26 ಕೋಟಿ ರೂಪಾಯಿ ಮಾತ್ರ. ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಗುಡುಗಿದರು.
ಬೆಳೆ ವಿಮೆ ಮೇಲೆ ರೈತರ ವಿಶ್ವಾಸವೇ ಕಡಿಮೆಯಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಹಲವು ಸಚಿವರ ಕೈವಾಡವಿದೆ ಎಂದು ಇದೇ ವೇಳೆ ಆರೋಪಿಸಿದ್ದಾರೆ. ಈ ವೇಳೆ, ಮಾಜಿ ಶಾಸಕ ಬಿ.ಆರ್.ಪಾಟೀಲ್, ಕಲಬುರಗಿ ಡಿಸಿಸಿ ಜಿಲ್ಲಾಧ್ಯಕ್ಷ ಜಗದೇವಪ್ಪ ಗುತ್ತೆದಾರ ಉಪಸ್ಥಿತರಿದ್ದರು.