ಕಲಬುರಗಿ: ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ, ಯಾರ ಮನೆ ಮುಂದೆಯೂ ನಿಲ್ಲಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖಗೊಂಡ ನಂತರ ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರ ದಾಹ ನನಗಿಲ್ಲ. ಸಚಿವರನ್ನಾಗಿಸಿ, ಎಂಎಲ್‌ಸಿಯನ್ನಾಗಿಸಿ ಎಂದು ಯಾರ ಮನೆ ಬಳಿಯೂ ಹೋಗಲ್ಲ. ಈ ಮಾಲೀಕಯ್ಯ ಗುತ್ತೇದಾರ್ ಭಿಕ್ಷೆ ಬೇಡೋ ಜಾಯಮಾನದವನಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ, ಸದ್ಯಕ್ಕೆ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುತ್ತೆನೆ. ಆದ್ರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕು. ನಮ್ಮ ಜಿಲ್ಲೆಗೂ ಸಚಿವ ಸ್ಥಾನ ಸಿಗಬೇಕು. ಜಿಲ್ಲೆಗೆ ಬಾರದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನೂ ಬದಲಾಯಿಸಬೇಕು.
ಈ ಭಾಗದವರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು. ಯಾರೂ ಉತ್ತಮವಾಗಿ ಕೆಲಸ ಮಾಡುತ್ತಾರೋ ಅವರಿಗೆ ಉಸ್ತುವಾರಿ ನೀಡಲಿ. ಇಷ್ಟು ದಿನ ಸಚಿವ ಸ್ಥಾನದಲ್ಲಿ ಮಜಾ ಮಾಡಿದವರನ್ನು ಕೈಬಿಡಲಿ, ಹೊಸಬರಿಗೆ ಸಚಿವ ಸ್ಥಾನದ ಅವಕಾಶ ನೀಡಲಿ ಎಂದು ಮಾಲೀಕಯ್ಯ ಗುತ್ತೇದಾರ್ ಆಗ್ರಹಿಸಿದ್ದಾರೆ.
ಅತಿವೃಷ್ಟಿ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಮನವಿ : ಇದೇ ವೇಳೆ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, ಕೇಂದ್ರದಿಂದ ಹೆಚ್ಚಿನ ಪರಿಹಾರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ. ಸರ್ಕಾರ ತಕ್ಷಣವೇ ಮನೆ ಹಾಗೂ ಬೆಳೆ ಹಾನಿಯ ಸರ್ವೆ ಮಾಡಿಸಿ ಪರಿಹಾರ ವಿತರಿಸಲಿ ಎಂದು ಮಾಲೀಕಯ್ಯ ಒತ್ತಾಯಿಸಿದ್ದಾರೆ.
ಯಮಲೋಕದ ಹೊಸ್ತಿಲು ಮುಟ್ಟಿ ಬಂದಿರುವೆ : ಕೊರೊನಾಗೆ ಸೋಂಕಿಗೆ ಬಲಿಯಾಗಿ ಜೀವನ್ಮರಣದ ನಡುವೆ ಹೋರಾಡಿ ಬಂದಿರುವೆ. ನಾಲ್ಕೈದು ದಿನ ಯಮಯಾತನೆ ಅನುಭವಿಸಿರುವೆ. ಒಂದು ರೀತಿಯ ಯಮಲೋಕದ ಹೊಸ್ತಿಲು ಮುಟ್ಟಿ ವಾಪಸ್ ಬಂದಿರುವೆ. ಬದುಕಿತ್ತೇನೆ ಎಂಬ ಆಸೆ ಕಳೆದುಹೋಗಿತ್ತು. ಯಾರು ಸಹ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದಿರಿ ಎಂದು ತಾವು ಕೊರೊನಾ ಸೋಂಕಿಗೆ ತುತ್ತಾದಾಗ ಅನುಭವಿಸಿದ ಯಮಯಾತನೆ ಹೇಳಿದರು.