ಕಲಬುರಗಿ: ಸಾಮಾನ್ಯವಾಗಿ ಗ್ರಾಮ ಪಂಚಾಯಿತಿಯಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುತ್ತಾರೆ. ಆದರೆ ಇಲ್ಲೊಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ನಂತರ ತಾಲೂಕು ಪಂಚಾಯಿತಿ ಸದಸ್ಯರಾಗಿ ಇದೀಗ ಮತ್ತೆ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸುತ್ತಿದ್ದಾರೆ.
ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಅಣ್ಣಾರಾವ್ ಗೌಡ ಪೊಲೀಸ್ ಪಾಟೀಲ್, ಈ ಬಾರಿ ಇಂಗಳಗಿ ಗ್ರಾಮ ಪಂಚಾಯಿತಿ ವಾರ್ಡ್ ನಂ.3ರಲ್ಲಿ ಸ್ಪರ್ಧೆಗಿಳಿದಿದ್ದಾರೆ. ಪ್ರಾರಂಭದಲ್ಲಿ ಇದೇ ಇಂಗಳಗಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ ನೇರವಾಗಿ 2006ರಲ್ಲಿ ಭಂಕೂರು ಕ್ಷೇತ್ರದಿಂದ ಜಿಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಓದಿ: ಗದಗ: ಗ್ರಾಪಂ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಆತ್ಮಹತ್ಯೆಗೆ ಶರಣು
ತದನಂತರ 2011ರಿಂದ 2016ರವರೆಗೆ ಚಿತ್ತಾಪುರ ತಾಲೂಕು ಪಂಚಾಯಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅಣ್ಣಾರಾವ್ ಪೊಲೀಸ್ ಪಾಟೀಲ್, ಮತ್ತೆ ಗ್ರಾಪಂ ಚುನಾವಣೆಗೆ ಮರಳಿದ್ದಾರೆ.
ಜನರ ಒತ್ತಾಯದ ಮೇರೆಗೆ ಮತ್ತೆ ಗ್ರಾಪಂ ಸ್ಪರ್ಧಿಸಿರುವೆ:
ಈ ಕುರಿತು "ಈಟಿವಿ ಭಾರತ"ಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನ ಸೇವೆ ಯಾವುದಾದರೇನು? ಅಭಿವೃದ್ಧಿಗೋಸ್ಕರ ಗ್ರಾಮದ ಜನ ಸ್ಪರ್ಧೆಗೆ ಒತ್ತಾಯಿಸಿದ್ದರಿಂದ ನಾಮಪತ್ರ ಸಲ್ಲಿಕೆ ಮಾಡಿರುವೆ. ಜನರ ನಿರ್ಧಾರಕ್ಕೆ ಬದ್ಧವಾಗಿ ಕೆಲಸ ಮಾಡಲು ಇಚ್ಛಿಸಿದ್ದೇನೆ. ನಲವತ್ತು ವರ್ಷ ರಾಜಕೀಯದ ಅನುಭವವಿದ್ದು, ಇಂಗಳಗಿ ಗ್ರಾಮದ ಅಭಿವೃದ್ಧಿಗೆ ನಿಷ್ಪಕ್ಷಪಾತವಾಗಿ ಶ್ರಮಿಸುವೆ ಎಂದು ತಿಳಿಸಿದ್ದಾರೆ.