ಕಲಬುರಗಿ: ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕು ರಂಗಭೂಮಿಯ ಕಲಾವಿದರ ಬದುಕಿಗೆ ಕೊಳ್ಳಿ ಇಟ್ಟಿದೆ. ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಲಾವಿದರಿಗೆ ಪೊಲೀಸ್ ಅಧಿಕಾರಿಯೊಬ್ಬರು ನೆರವಿಗೆ ಧಾವಿಸಿದ್ದಾರೆ.
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಸೋಮಲಿಂಗ ಒಡೆಯರ್ ಮೂಲತಃ ಕಲಬುರಗಿಯವರು. ಇಲ್ಲಿನ ಗೋಗಿಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ವೃತ್ತಿ ರಂಗಭೂಮಿ, ಜನಪದ ಕಲಾವಿದರು, ದಿನದ ದುಡಿಯಮೆಯನ್ನೇ ಅವಲಂಬಿಸಿದವರ ಸಹಾಯಕ್ಕೆ ನಿಂತಿದ್ದಾರೆ.
ಪೊಲೀಸ್ ಅಧಿಕಾರಿ ಜೊತೆ ಕೈ ಜೋಡಿಸಿರುವ ಮನಸು ಮೆಲೋಡಿಸ್ ಸಂಸ್ಥೆಯ ಅಧ್ಯಕ್ಷೆ ಸುಮಾ ಬಡಿಗೇರಾ ಸೇರಿದಂತೆ ವಿವಿಧ ಕಲಾಭಿಮಾನಿಗಳು ಈ ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಕಲಾವಿದರ ಮನೆಗೆ ತೆರಳಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಪಿಎಸ್ಐ ಒಡೆಯರ್ ನೆರವಿನಿಂದ 60ಕ್ಕೂ ಹೆಚ್ಚು ಕಲಾವಿದರಿಗೆ ದಿನಸಿ ಪೂರೈಸಲಾಗಿದೆ.
ರಾಜ್ಯದ ಇತರೆಡೆ ಸಂಚರಿಸಿ ಕಲಾವಿದರಿಗೆ ಸಹಾಯ ಮಾಡುವ ಅಭಿಲಾಷೆಯನ್ನು ಮನಸು ಮೆಲೋಡಿಸ್ ಸಂಸ್ಥೆಯ ಅಧ್ಯಕ್ಷೆ ಸುಮಾ ಬಡಿಗೇರಾ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.