ಕಲಬುರಗಿ: ದುಷ್ಕರ್ಮಿಗಳ ತಂಡವೊಂದು ಇಂದು (ಶನಿವಾರ) ಮಧ್ಯಾಹ್ನ ಇಬ್ಬರ ಮೇಲೆ ಫೈರಿಂಗ್ ಮಾಡಿದ ಘಟನೆ ನಡೆದಿದೆ. ಕಲಬುರಗಿ ನಗರದ ಆಳಂದ ಚೆಕ್ ಪೊಸ್ಟ್ ಬಳಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ಚನ್ನವೀರ ಪಾಟೀಲ್ ಮೇಲೆ ಫೈರಿಂಗ್ ನಡೆದಿದೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ವ್ಯಕ್ತಿಗೂ ಗುಂಡು ತಗುಲಿದೆ. ಚನ್ನವೀರ ಪಾಟೀಲ್ ಅವರು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ ಪಾಟೀಲ್ ಅವರ ಸಹೋದರ. ಫೈರಿಂಗ್ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಬುಲೇರೋ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದರಿಂದ ಚನ್ನವಿರ ಪಾಟೀಲ್ ಅವರ ಕೈಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ವ್ಯಕ್ತಿಗೂ ಗುಂಡು ತಗುಲಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿ ವಿಚಾರಕ್ಕೆ ಫೈರಿಂಗ್: ಆಳಂದ ಚೆಕ್‌ಪೋಸ್ಟ್ ಬಳಿ ಇರುವ ಖಾನಾವಳಿಯೊಂದರ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಬಸಯ್ಯ ಗುತ್ತೇದಾರ್ ಹಾಗೂ ಉದ್ಯಮಿ ಚನ್ನವೀರ ಪಾಟೀಲ್ ಮಧ್ಯೆ ಕೆಲ ವರ್ಷಗಳಿಂದ ವೈಷಮ್ಯ ಇತ್ತು. ಇದೇ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ತೀರ್ಪು ಚನ್ನವೀರ ಪರವಾಗಿಯೂ ಬಂದಿತ್ತು. ಇದರಿಂದ ಬಸಯ್ಯ ಮತ್ತಷ್ಟು ಕುಪಿತಗೊಂಡಿದ್ದರು ಎಂದು ತಿಳಿದುಬಂದಿದೆ.
ಅದರಂತೆ ಇಂದು ಬಸಯ್ಯ ಗುತ್ತೇದಾರ್ ಸೇರಿದಂತೆ 30 ರಿಂದ 35 ಜನ ಸ್ಥಳಕ್ಕೆ ಬಂದು ಖಾನಾವಳಿ ಗೋಡೆ ಕೆಡುವಲು ಮುಂದಾದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಚನ್ನವೀರ ಪಾಟೀಲ್ ಮತ್ತು ಬೆಂಬಲಿಗರು, ಬಸಯ್ಯ ಗುತ್ತೇದಾರ್ ಜೊತೆ ವಾದಕ್ಕೆ ಇಳಿದಿದ್ದಾರೆ. ವಾದ ವಿಕೋಪಕ್ಕೆ ಹೋಗಿದ್ದರಿಂದ ಬಸಯ್ಯ ಗುತ್ತೇದಾರ್ ತಮ್ಮ ಬಳಿಯಿದ್ದ ಪಿಸ್ತೂಲ್ನಿಂದ ಮೂರು ಸುತ್ತು ಫೈರಿಂಗ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಚನ್ನವೀರ ಕೈಗೆ ಒಂದು ಬುಲೆಟ್ ಹೊಕ್ಕರೆ, ಜಗಳ ನೋಡುತ್ತ ನಿಂತಿದ್ದವನ ಕಾಲಿಗೆ ಒಂದು ಗುಂಡು ಹೊಕ್ಕಿದೆ.
ಜಗಳ ನೋಡುತ್ತಿದ್ದವನ ಕಾಲಿಗೆ ಹೊಕ್ಕ ಗುಂಡು: ಚನ್ನವೀರ ಪಾಟೀಲ್ ಮತ್ತು ಬಸಯ್ಯ ಗುತ್ತೇದಾರ್ ಇಬ್ಬರ ಸೈಟ್‌ಗಳು ಅಕ್ಕ-ಪಕ್ಕದಲ್ಲಿಯೇ ಇವೆ. ಹೀಗಾಗಿ ಇಬ್ಬರ ಮಧ್ಯೆ ತಗಾದೆ ಮೊದಲಿನಿಂದಲೂ ಇತ್ತು. ಆಗಾಗ ಇಬ್ಬರ ನಡುವೆ ಜಗಳವೂ ಆಗುತ್ತಿತ್ತು ಎನ್ನಲಾಗಿದೆ. ಇಂದು ಸಹ ಅವರ ಜಗಳ ಅತಿರೇಕಕ್ಕೆ ಹೋಗಿತ್ತು. ಈ ವೇಳೆ ಬಸಯ್ಯ ಗುಂಡು ಹಾರಿಸಿದಾಗ ಜಗಳ ನೋಡುತ್ತಿದ್ದ ಎಂ.ಎಸ್.ಕೆ.ಮಿಲ್ ಬಡಾವಣೆಯ ನಿವಾಸಿ ಶೇಖ್ ಅಬೂಬಕರ್ ಸಿದ್ದಕಿ ಎಂಬುವವರ ಕಾಲಿಕೆ ಹೊಕ್ಕಿದೆ. ಗಾಯಗೊಂಡಿರುವ ಚನ್ನವೀರ ಮತ್ತು ಶೇಖ್ ಅಬೂಬಕರ್ ಸಿದ್ದಕಿಯನ್ನ ನಗರದ ಯುನೈಟೆಡ್ ಹಾಗೂ ಸನ್‌ರೈಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಪಿಸ್ತೂಲ್ ಜೊತೆ ಮಾರಕಾಸ್ತ್ರಗಳು: ಖಾನಾವಳಿ ಗೋಡೆ ಕೆಡವಲು ಬಂದಿದ್ದ ಬಸಯ್ಯ ಆ್ಯಂಡ್ ಟೀಮ್ ಮೊದಲೇ ಪ್ರೀಪ್ಲಾನ್ ಮಾಡಿಕೊಂಡು ಬಂದಿದ್ದರು ಎಂಬ ಮಾಹಿತಿ ಇದೆ. ತಮ್ಮ ಕೆಲಸಕ್ಕೆ ಅಡ್ಡಿ ಪಡಿಸಿದ್ರೆ ಅವರಿಗೊಂದು ಗತಿ ಕಾಣಿಸಬೇಕೆಂದು ತಯಾರಿ ಮಾಡಿಕೊಂಡಿದ್ದರು. ಬರುವಾಗಲೇ ತಮ್ಮ ವಾಹನದಲ್ಲಿ ಕೊಡಲಿ ಸೇರಿ ಇತರ ಮಾರಕಾಸ್ತ್ರಗಳನ್ನು ಸಂಗ್ರಹಿಸಿಕೊಂಡು ಬಂದಿದ್ದರು. ಗುಂಡು ಹಾರಿಸಿದ ನಂತರ ವಾಹನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಮಾರಕಾಸ್ತ್ರಗಳ ಸಮೇತ ವಾಹನವನ್ನು ಜಪ್ತಿ ಮಾಡಿದ್ದಾರೆ.
ಗುಂಡಿನ ಸದ್ದಿಗೆ ಜನ ಚಲ್ಲಾಪಿಲ್ಲಿ: ಹಾಡಹಗಲೇ ನಡೆದ ಈ ಘಟನೆಯಿಂದ ಊರು ಕೇರಿಗೆ ಹೋಗಲು ಆಳಂದ ಚಕ್ ಪೋಸ್ಟ್ ಬಳಿ ನಿಂತಿದ್ದ ಜನ ಸದ್ದು ಕೇಳುತ್ತಿದ್ದಂತೆ ಚಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಈ ಘಟನೆಯಿಂದ ಕೆಲಕಾಲ ಆಳಂದ ಚೆಕ್ ಪೋಸ್ಟ್ ಹತ್ತಿರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ: ಘಟನಾ ಸ್ಥಳಕ್ಕೆ ಕಲಬುರಗಿ ನಗರದ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಮತ್ತು ಸಬ್ ಅರ್ಬನ್ ಠಾಣೆ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೈರಿಂಗ್ ಮಾಡಿ ಪರಾರಿಯಾಗಿರುವ ಬಸಯ್ಯ ಗುತ್ತೇದಾರ್ ಆತನ ಸಹಚರರ ಬಂಧನಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಮೂರು ತಂಡಗಳನ್ನ ರಚನೆ ಮಾಡಿದ್ದು, ಶೀಘ್ರವೇ ಆರೋಪಿಗಳನ್ನ ಬಂಧಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ: ತೀವ್ರವಾಗಿ ಗಾಯಗೊಂಡ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು - ಬಿಡುಗಡೆ!