ಕಲಬುರಗಿ: ಆಕಸ್ಮಿಕ ಬೆಂಕಿ ತಗುಲಿ ಫರ್ನಿಚರ್ ಅಂಗಡಿ ಸುಟ್ಟು ಕರಕಲಾದ ಘಟನೆ ಹೈಕೋರ್ಟ್ ಬಳಿಯ ಶರಣ ಸಿರಸಗಿ ಕ್ರಾಸ್ ಬಳಿ ನಡೆದಿದೆ. ಗುರುಮೌನೇಶ್ವರ ಫರ್ನಿಚರ್ ಅಂಗಡಿ ಬೆಂಕಿಗೆ ಆಹುತಿಯಾಗಿದೆ.
ಕಲಬುರಗಿಯ ಬಿದ್ದಾಪುರ ಕಾಲೋನಿ ನಿವಾಸಿ ಗುರು ಬಡಿಗೇರ ಎಂಬುವರಿಗೆ ಸೇರಿದ ಅಂಗಡಿ ಇದಾಗಿದೆ. ಅಂಗಡಿಯಲ್ಲಿ ಸಾಗುವಾನಿ ಕಟ್ಟಿಗೆ, ಪ್ಲೇವುಡ್ನಿಂದ ತಯಾರಿಸಿದ ಫರ್ನಿಚರ್, ಕಟ್ಟಿಗೆ, ಮಷಿನ್ಗಳು ಸೇರಿ ಅಂದಾಜು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಮಾಹಿತಿ ಲಭ್ಯವಾಗಿದೆ. ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಎರಡು ಅಗ್ನಿಶಾಮಕ ದಳದ ವಾಹನಗಳಿಂದ ನೀರು ಸಿಂಪಡಿಸಿ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.