ಕಲಬುರಗಿ: ನೆರೆಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಗ್ರಾಮದಲ್ಲಿ ನುಗ್ಗಿದ ನೀರಿನಿಂದ ದುರ್ವಾಸನೆ ಬೀರಲಾರಂಭಿಸಿದೆ. ಇದರಿಂದ ಪ್ರವಾಹ ಪೀಡಿತ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ. ನದಿ ನೀರು ಮನೆಗಳಿಗೆ ಬರುವುದರಿಂದ ಮನೆಗಳು ಕೆಸರುಗದ್ದೆಯಂತಾಗಿದ್ದು, ದುರ್ವಾಸನೆ ಬೀರಲಾರಂಭಿಸಿದೆ.
ಕಾಳಜಿ ಕೇಂದ್ರದಿಂದ ಮನೆಗೆ ತೆರಳಿದ ಸಂತ್ರಸ್ತರಿಗೆ ಇದೊಂದು ರೀತಿಯ ಪ್ರಾಣ ಭಯ ಉಂಟುಮಾಡಿದೆ. ಜನರು ಸ್ವತಃ ತಮ್ಮ ಮನೆಗಳಿಗೆ ತುಂಬಿದ ರಾಡಿಯನ್ನು ಹೊರತೆಗೆಯುವಲ್ಲಿ ನಿರತರಾಗಿದ್ದಾರೆ. ರಾಡಿ ಹೊರ ಹಾಕಿದರೂ ಸಹ ದುರ್ವಾಸನೆ ಕಡಿಮೆಯಾಗಿಲ್ಲ. ಇನ್ನೂ ಮನೆಗಳ ಮುಂದೆ ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟ ಸಹ ಹೆಚ್ಚಾಗಿದೆ.
ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾಡಳಿತ ಕ್ರಮ : ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಸೇವಿಸಬೇಕೆಂದು ಜಿಲ್ಲಾಧಿಕಾರಿಗಳಾದ ಶ್ರೀಮತಿ ವಿ.ವಿ. ಜ್ಯೋತ್ಸ್ನಾ ಸಂತ್ರಸ್ತರಿಗೆ ಸಲಹೆ ನೀಡಿದ್ದಾರೆ.
ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯತ್, ಗ್ರಾಮೀಣ ಮತ್ತು ನಗರ ಕುಡಿಯುವ ನೀರು ವಿಭಾಗ, ಮಹಾನಗರ ನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರವಾಹ ಮತ್ತು ಮಳೆಯಿಂದ ನೀರು ಹರಿದು ಹಾನಿಯಾಗಿರುವ ಪೈಪ್‍ಲೈನ್ ಸರಿಪಡಿಸಿ, ಸಮರ್ಪಕವಾಗಿ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡುವಂತೆ ಡಿಸಿ ಜ್ಯೋತ್ಸ್ನಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇಂತಹ ನೀರಿರುವ ಜಾಗಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಹಾಗೂ ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ಉತ್ಪತ್ತಿಯಾಗದಂತೆ ತಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.