ಕಲಬುರಗಿ: ಹೆರಿಗೆ ವೇಳೆ ರಕ್ತಸ್ರಾವವಾಗಿ ಬಾಣಂತಿ ಮೃತಪಟ್ಟಿರುವ ಘಟನೆ ಅಫಜಲಪುರ ತಾಲೂಕಿನ ಆತನೂರ ಗ್ರಾಮದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಅಂತ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೀತಾ ನಿತೇಶ್ ಅಗಸರ (24) ಮೃತ ಬಾಣಂತಿ, ಶುಕ್ರವಾರ ತಡರಾತ್ರಿ 11:30ರ ಸುಮಾರಿಗೆ ಆತನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೀತಾಗೆ ಹೆರಿಗೆ ಆಗಿದ್ದು, ಗಂಡು ಮಗು ಜನಿಸಿದೆ. ಹೆರಿಗೆ ನಂತರ ರಕ್ತಸ್ರಾವವಾಗಿ ಆಕೆ ಮೃತಪಟ್ಟಿದ್ದಾಳೆ. ಆದರೆ ರಕ್ತಸ್ರಾವವಾಗುತ್ತಿದ್ದ ಕುರಿತು ಸಿಬ್ಬಂದಿಗೆ ಮಾಹಿತಿ ನೀಡಿದರೂ ಗಮನಹರಿಸಿಲ್ಲ. ಪರಿಸ್ಥಿತಿ ಕೈಮೀರಿದಾಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. 1 ಗಂಟೆ ಕಾದರು ಆ್ಯಂಬುಲೆನ್ಸ್ ಬಾರದೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದ ಕಾರಣ ಘಟನೆ ನಡೆದಿದೆ. ಮಹಿಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಆಕೆ ಬದುಕಿಲ್ಲ ಅಂತ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.
ಜೊತೆಗೆ ಬಾಣಂತಿ ಮೃತಪಟ್ಟ ಸುದ್ದಿ ತಿಳಿದು ಆಸ್ಪತ್ರೆ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಆತನೂರ ಬಳಿಯ ಕಲಬುರಗಿ- ಅಫಜಲಪುರ ಹೆದ್ದಾರಿ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯುವತಿಯ ವಿಚಾರಕ್ಕೆ ಸಹಪಾಠಿಗಳ ಮಧ್ಯೆ ಜಗಳ: ಓರ್ವನ ಕೊಲೆ